

ಹಾವೇರಿ: ಶ್ರೀ ಕಮಲೇಶಚಂದ್ರ ಕಮಿಟಿಯ 7ನೇ ವೇತನ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು, ಎಂಟು ಗಂಟೆ ಕೆಲಸ ನೀಡುವುದು, ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ(ಜಿಡಿಎಸ್)ದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಎಂಜಿ ರಸ್ತೆಯ ಪ್ರಧಾನ ಅಂಚೆ ಕಚೇರಿ ಎದುರು ಕುಳಿತು ಬುಧವಾರ ಒಂದು ದಿನದ ಮುಷ್ಕರ ನಡೆಸಿದ ಪ್ರತಿಭಟನಾಕಾರರು, ವಿವಿಧ ಬೇಡಿಕೆಗಳ ಪ್ಲೇಕಾರ್ಡ್ ಪ್ರದರ್ಶಿಸಿದರು. ಸದ್ಯ ನಾಲ್ಕು ತಾಸು ಕೆಲಸ ನೀಡುತ್ತಿದ್ದು, ಎಂಟು ಗಂಟೆಗಳ ಕೆಲಸ ನೀಡಬೇಕು. ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುವುದನ್ನು ನಿಲ್ಲಿಸಬೇಕು.
5 ಲಕ್ಷ ರೂ.ವರೆಗೆ ಗ್ರೂಪ್ ಇನ್ಸೂರೆನ್ಸ್ ಮಾಡಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದ ಜಿಡಿಎಸ್ ನೌಕರರಿಗೆ ಕಿರುಕುಳ ನೀಡಬಾರದು. ಜಿಡಿಎಸ್ ಗ್ರಾಚುಟಿ ಹಣವನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಜಿಡಿಎಸ್ ನೌಕರರ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಭಾಗೀಯ ಅಧ್ಯಕ್ಷ ಎಚ್.ಎಸ್.ಪೋಲಿಸ್‌ಗೌಡ್ರು, ವಿಭಾಗೀಯ ಕಾರ್ಯದರ್ಶಿ ಸಂತೋಷ ದೊಡ್ಡಮನಿ, ಗೌರವಾಧ್ಯಕ್ಷ ಎಂ.ಕೆ.ಕಮ್ಮಾರ, ಭರಮಪ್ಪ ಕೈದಾಳಿ, ಗಣೇಶ ಬಸಪ್ಪನವರ, ತಿಪ್ಪಣ್ಣ ಶೇಖಣ್ಣನವರ, ಸೇರಿದಂತೆ ನೂರಾರು ಸೇವಕರು ಪಾಲ್ಗೊಂಡಿದ್ದರು.