

ಹಾವೇರಿ: ನಗರದ ಇತಿಹಾಸ ಪ್ರಸಿದ್ಧ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಫೆ.23ರಿಂದ ಮಾ.5ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ದೇಗುಲ, ಚೌತಮನಿ ಕಟ್ಟಿ ವೃತ್ತ ಸೇರಿದಂತೆ ನಗರದ ವಿವಿಧ ರಸ್ತೆಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.
ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಹುಕ್ಕೇರಿಮಠದ ಬಳಿ ದ್ವಾರ ಬಾಗಿಲು, ಗಾಂಧಿ ರಸ್ತೆಯ ಚೌತಮನಿ ಕಟ್ಟೆಯಲ್ಲಿ ಭವ್ಯಮಂಟಪ ನಿರ್ಮಾಣಗೊಳ್ಳುತ್ತಿವೆ. ನಗರದ ಜನರೆಲ್ಲ ಬಂಧು, ಬಳಗವನ್ನು ಆಹ್ವಾನಿಸಿದ್ದು, ಜಾತ್ರೆ ಆಚರಣೆಗೆ ಸಜ್ಜಾಗಿದ್ದಾರೆ. ಜಾತ್ರಾ ಮಹೋತ್ಸವದ ನಿಮಿತ್ತ ಫೆ.23ರಂದು ಸಂಜೆ 5ಕ್ಕೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ದೇವಸ್ಥಾನದ ಓಣಿಯಲ್ಲಿ ಅಂಕಿ ಹಾಕುವುದು ಹಾಗೂ ಪಡ್ಲಗಿ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ನಗರದ ವ್ಯಾಪ್ತಿ ದೊಡ್ಡದಿರುವುದರಿಂದ ದ್ಯಾಮವ್ವನ ಓಣಿ ವ್ಯಾಪ್ತಿಯಲ್ಲಿ ಮಾತ್ರ ಕಟ್ಟುನಿಟ್ಟಿನ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಚೌತಮನಿಕಟ್ಟಿಯಲ್ಲಿ ದೇವಿ ಪ್ರತಿಷ್ಠಾಪನೆ
ನಗರದ ಹೃದಯ ಭಾಗ ಮಹಾತ್ಮ ಗಾಂಧಿ ರಸ್ತೆಯಲ್ಲಿ ದ್ಯಾಮವ್ವನ ಪಾದಗಟ್ಟೆ ಸ್ಥಳವಿದೆ. ಇದೇ ರಸ್ತೆಯಲ್ಲಿ ದ್ಯಾಮವ್ವ ದೇವಿ ಚೌತಮನಿಕಟ್ಟಿ ಇದ್ದು, ಫೆ.27ರಂದು ದೇವಸ್ಥಾನದಿಂದ ದ್ಯಾಮವ್ವದೇವಿ ಮೂರ್ತಿಯ ಮೆರವಣಿಗೆ ಹೊರಟು ಚೌತಮನಿಕಟ್ಟೆಗೆ ಬಂದು ದೇವಿ ಆಸಿನಳಾಗುತ್ತಾಳೆ. ಜಾತ್ರೆಯ ಎಲ್ಲ ರೀತಿಯ ವಿಶೇಷ ಪೂಜಾ ಕೈಂಕರ್ಯಗಳು ಇದೇ ಕಟ್ಟೆಯಲ್ಲಿ ನಡೆಯಲಿವೆ.
ಭವ್ಯ ಮೆರವಣಿಗೆ..
ಫೆ.27ರಂದು ನಗರದ ದೇವಸ್ಥಾನಗಳಿಗೆ ನೈವೇದ್ಯ ಮಾಡಿಸುವುದು, ಅದೇ ದಿನ ಸಂಜೆ 4.30 ಗಂಟೆಗೆ ವಿವಿಧ ವಾದ್ಯವೈಭೋಗ, ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಭವ್ಯ ಉತ್ಸವ ಮೆರವಣಿಗೆ ಆರಂಭಗೊಳ್ಳಲಿದೆ.
ಮೆರವಣಿಗೆಯು ನಗರದ ದ್ಯಾಮವ್ವನ ಗುಡಿಯಿಂದ ನಾಯ್ಕರಚಾಳ, ಹಳೆಅಂಚೆ ಕಚೇರಿ ರಸ್ತೆ, ಕಮಲ ಕಲ್ಯಾಣ ಮಂಟಪ ರಸ್ತೆ, ಜೈನರ ರಸ್ತೆ, ಹಳೆ ಊರಿನ ಓಣಿ, ಶ್ರೀರಾಮದೇವರ ಗುಡಿ, ಗಾಂಧಿವೃತ್ತ, ಕಲ್ಲುಮಂಟಪ ರಸ್ತೆ, ಬಸ್ತಿಓಣಿ, ತರಕಾರಿ ಮಾರುಕಟ್ಟೆ, ಗೌಳಿಗಲ್ಲಿ, ಯಾಲಕ್ಕಿ ಓಣಿ, ಗುಜ್ಜರ ಗುಡಿ, ಪುರದ ಓಣಿ, ಚೌಡೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಸುಭಾಸ ವೃತ್ತ, ಮೇಲಿನಪೇಟೆ, ಗಾಂಧಿರಸ್ತೆ, ಹಳೆಚಾವಡಿ ಮೂಲಕ ಫೆ.28ರ ಬೆಳಗ್ಗೆ ನಸುಕಿನ 4ಗಂಟೆಗೆ ಚೌತಮನಿ ಕಟ್ಟೆಯಲ್ಲಿ ಗ್ರಾಮದೇವತೆ ಪ್ರತಿಷ್ಠಾಪನೆಗೊಳ್ಳಲಿದ್ದಾಳೆ.
ಮಾ.2ಕ್ಕೆ ಓಕಳಿ..
ಫೆ.28ರಂದು ಬೆಳಗ್ಗೆ 5 ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿ ಸಮರ್ಪಣೆ ನಡೆಯಲಿದೆ. ಮಾ.2ರವರೆಗೆ ಶ್ರೀದೇವಿಗೆ ಸೇವೆ ಮುಂದುವರಿಯಲಿದ್ದು, ಅಂದು ಸಂಜೆ 4ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಮಧ್ಯಾಹ್ನ 2.30 ಗಂಟೆಗೆ ಚೌತಮನಿಕಟ್ಟಿಯಿಂದ ಹುಕ್ಕೇರಿ ಮಠದವರೆಗೆ ಕುಂಕುಮ, ಬಂಡಾರದಿಂದ ಓಕಳಿ ಆಡುವ ಸಂಭ್ರಮ ನಡೆಯಲಿದೆ. ಮಾ.5ರಂದು ಬೆಳಗ್ಗೆ 10 ಗಂಟೆಗೆ ದ್ಯಾಮವ್ವ ದೇವಿಯನ್ನು ಗುಡಿ ತುಂಬಿಸುವುದು, ಶ್ರೀದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬೆಟ್ಟಪ್ಪ ಕುಳೇನೂರ ಹಾಗೂ ಕಾರ್ಯದರ್ಶಿ ಅಶೋಕ ಮುದಗಲ್ಲ ತಿಳಿಸಿದ್ದಾರೆ.