ಆನ್‌ಲೈನ್ ಸೆಂಟರ್‌ನಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಿ; ಹಾವೇರಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಮನವಿ

22 HVR 2
Published on

ಹಾವೇರಿ: ಗ್ರಾಮ ಒನ್ ಹಾಗೂ ಸಿಎಸ್‌ಸಿ ಆನ್‌ಲೈನ್ ಸೆಂಟರ್‌ಗಳಲ್ಲಿ ಪಾಸ್‌ಪೋರ್ಟ್ ಪೋಟೋ ತೆಗೆಯುವುದನ್ನು ನಿಷೇಸುವಂತೆ ಒತ್ತಾಯಿಸಿ ಹಾವೇರಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ಹಾವೇರಿ ತಾಲೂಕಿನಾದ್ಯಂತ ಗ್ರಾಮ ಒನ್ ಹಾಗೂ ಸಿಎಸ್‌ಸಿ ಆನ್‌ಲೈನ್ ಸೆಂಟರ್‌ಗಳಲ್ಲಿ ಪಾಸ್‌ಪೋರ್ಟ್ ಸೈಜಿನ ಪೋಟೋ ತೆಗೆಯುತ್ತಿರುವುದು ಕಂಡುಬಂದಿದೆ. ಇದರಿಂದ ವೃತ್ತಿನಿರತ ಛಾಯಾಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ, ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ತೆರಿಗೆ ಕಟ್ಟುತ್ತಾ ಛಾಯಾಗ್ರಹಣ ವೃತ್ತಿಯನ್ನು ಮಾಡುತ್ತಿದ್ದೇವೆ. ಗ್ರಾಮ ಒನ್, ಸಿಎಸ್‌ಸಿ ಕೇಂದ್ರಗಳಲ್ಲಿ ಪೋಟೋ ತೆಗೆಯುವುದರಿಂದ ವೃತ್ತಿನಿರತ ಛಾಯಾಗ್ರಾಹಕರ ಹೊಟ್ಟೆ ಮೇಲೆ ಬರೆ ಎಳೆದಂತಾಗುತ್ತದೆ. ಆದ್ದರಿಂದ ತಾಲೂಕಿನಾದ್ಯಂತ ಗ್ರಾಮ ಒನ್ ಹಾಗೂ ಸಿಎಸ್‌ಸಿ ಕೇಂದ್ರಗಳಲ್ಲಿ ಪೋಟೊ ತೆಗೆಯುವುದನ್ನು ನಿಷೇಧಿಸಲು ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.

ಸಂಘದ ತಾಲೂಕಾಧ್ಯಕ್ಷ ಶಂಭನಗೌಡ ಅಂದಾನಿಗೌಡ್ರ, ಕಾರ್ಯದರ್ಶಿ ಮಾಲತೇಶ ಇಚ್ಚಂಗಿ, ಉಪಾಧ್ಯಕ್ಷ ಬಸವರಾಜ ಚಾವಡಿ, ಸದಸ್ಯರಾದ ಅಶೋಕ ಬ್ಯಾಡಗಿ, ನಾಗರಾಜ ಹೊಸಮನಿ, ಶಿವಯೋಗಿ ಕೆ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net