ಗ್ರಾಪಂ ನೌಕರರಿಂದ ಅನಿರ್ದಿಷ್ಠಾವಧಿ ಮುಷ್ಕರ ನ.27ರಿಂದ; ಸೇವಾ ಭದ್ರತೆ, ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

22 Vijayakumar Mille
Published on

ಹಾವೇರಿ: ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಸೇವಾ ಭದ್ರತೆ, ಪಿಂಚಣಿ ವ್ಯವಸ್ಥೆ ಹಾಗೂ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘ(ಆರ್‌ಡಿಪಿಆರ್)ದಿಂದ ನ.27ರಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಮಿಳ್ಳೆ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್ ಆಪರೇಟರ್, ವಾಟರ್‌ಮೆನ್‌ಗಳು, ಅಟೆಂಡರ್, ಕ್ಲೀನರ್, ಸ್ವಚ್ಛತಾ ವಾಹಿನಿ ಚಾಲಕರು ಹೀಗೆ ಗ್ರಾಪಂ ನೌಕರರು ಸರಿಯಾದ ವೇತನ ಸಿಗದೇ ಪರದಾಡುತ್ತಿದ್ದಾರೆ. ಕನಿಷ್ಠ ವೇತನ ಇಲ್ಲ, ಸೇವಾ ಭದ್ರತೆ ಇಲ್ಲ, ಪಿಂಚಣಿ ಸೌಲಭ್ಯ, ಆರೋಗ್ಯ ವಿಮೆ, ಭವಿಷ್ಯನಿ ಇಡುಗಂಟು ಇಲ್ಲದೇ ಆರ್ಥಿಕವಾಗಿ ಬಹಳಷ್ಟು ನೊಂದಿದ್ದಾರೆ. ಸೇವಾ ಮುಂಬಡ್ತಿ, ಕುಟುಂಬ ನಿರ್ವಹಣೆ, ಮಕ್ಕಳಿಗೆ ಶಿಕ್ಷಣ ಕೊಡಿಸಲಿಕ್ಕೆ ಸಾಧ್ಯವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಗ್ರಾಪಂ ನೌಕರರ ಮೇಲೆ ಕೆಲಸದ ಒತ್ತಡ ಕೂಡ ಹೆಚ್ಚಾಗಿದೆ ಎಂದು ನೋವು ತೊಡಿಕೊಂಡರು.

ಸಂಘದಿಂದ ನ.27ರಿಂದ ಹಮ್ಮಿಕೊಂಡಿದೆ ಮುಷ್ಕರದಲ್ಲಿ ಗ್ರಾಪಂ ನೌಕರರನ್ನು ಸಿ ಮತ್ತು ಡಿ ವರ್ಗಕ್ಕೆ ಮೇಲ್ದರ್ಜೇಗೇರಿಸಿ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಸೇವಾ ಭದ್ರತೆ, ಕನಿಷ್ಠ ವೇತನ, ಆರೋಗ್ಯ ವಿಮಾ ಸೌಲಭ್ಯ, ಪಿಂಚಣಿ ವ್ಯವಸ್ಥೆ ನೀಡಬೇಕು, ಕೆಲಸದ ಒತ್ತಡ ಕಡಿಮೆ ಮಾಡಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂ ನೌಕರರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ದೇವಗಿರಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಪ್ಪ ಮಂಚಿನಕೊಪ್ಪ, ಹಿರೇಕೆರೂರ ಅಧ್ಯಕ್ಷ ರಮೇಶ ಹಂಚಿನಮನಿ, ಸಂತೋಷ ಕೂರಗುಂದ, ಕರಬಸಪ್ಪ ತಳವಾರ, ಆನಂದಪ್ಪ ಹಾದಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net