

ಕೇಶವಮೂರ್ತಿ ವಿ.ಬಿ. ಹಾವೇರಿ
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ಒಂದಾಗಿರುವ ಹಾವೇರಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಒಟ್ಟು 1,450 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಸದ್ಯಕ್ಕೆ 1,214 ಅತಿಥಿ ಶಿಕ್ಷಕರನ್ನು ನೇಮಿಸಲು ಅನುಮೋದನೆ ನೀಡುವ ಮೂಲಕ ತಾತ್ಕಾಲಿಕ ರಿಲೀಫ್ ನೀಡಿದೆ.
ಜಿಲ್ಲೆಯಲ್ಲಿ ಸದ್ಯ ಖಾಲಿ ಇರುವ 1,450 ಹುದ್ದೆಗಳ ಪೈಕಿ 1,214 ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಪ್ರಾಥಮಿಕ ಶಾಲೆಗಳಿಗೆ 964 ಹಾಗೂ ಪ್ರೌಢಶಾಲೆಗಳಿಗೆ 250 ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ.
ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈಗಾಗಲೇ ಡಿಡಿಪಿಐ ಸೂಚನೆ ಮೇರೆಗೆ ಮುಖ್ಯೋಪಾಧ್ಯಾಯರ ಸಭೆ ಕರೆದು ಆಯ್ಕೆ ಪ್ರಕ್ರಿಯೆ ಕುರಿತು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಆಯಾ ಶಾಲೆಯ ಎಸ್‌ಡಿಎಂಸಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಅತಿಥಿ ಶಿಕ್ಷಕರಿಗೆ 10,500 ರೂ. ಗೌರವಧನ ನಿಗಧಿ ಮಾಡಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಖಾಲಿ ಹುದ್ದೆಗಳಿಗೆ ಶಾಶ್ವತ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಈ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮುಂದಾಗಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕಿದೆ.
ಹೇಗೆ ನಡೆಯುತ್ತದೆ ಆಯ್ಕೆ ಪ್ರಕ್ರಿಯೆ ?
ಅತಿಥಿ ಶಿಕ್ಷಕರ ನೇಮಕಾತಿ ಸಂಬಂಧ ಎಸ್‌ಡಿಎಂಸಿ ವತಿಯಿಂದ ಆಯಾ ಗ್ರಾಮ ಪಂಚಾಯ್ತಿ, ಬಸ್ ನಿಲ್ದಾಣ, ಇತರೆಡೆಗಳಲ್ಲಿ ಸಾರ್ವಜನಿಕರ ನೋಟಿಸ್ ಅಂಟಿಸಲಾಗುತ್ತದೆ. ಪ್ರಾಥಮಿಕ ಶಾಲೆಗೆ ಡಿಎಡ್ ಹಾಗೂ ಪ್ರೌಢಶಾಲೆಗೆ ಬಿಎಡ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಶಾಲೆಯ ವ್ಯಾಪ್ತಿಯ ಗ್ರಾಮ, ಪಂಚಾಯ್ತಿ, ವಾರ್ಡ್‌ನ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಒಂದು ಹುದೆಗೆ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಶೇ.80ರಷ್ಟು ಪಠ್ಯಪುಸ್ತಕ ಪೂರೈಕೆ
ಜಿಲ್ಲೆಯಲ್ಲಿ ಶೇ.80ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದ್ದು, ಶೇ.20ರಷ್ಟು ಪೂರೈಕೆ ಬಾಕಿ ಇದೆ. ಶೇ.100ರಷ್ಟು ಸಮವಸ್ತ್ರ ಪೂರೈಕೆಯಾಗಿದ್ದು, ಆಯಾ ಶಾಲೆಗಳಿಗೆ ರವಾನಿಸಲಾಗಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದ್ದಾರೆ.
ಕೋಟ್:
ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಸಮಸ್ಯೆ ಹೆಚ್ಚಾಗಿತ್ತು. ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ಮಂಜೂರಾತಿ ಮಾಡಿರುವುದರಿಂದ ಅನುಕೂಲವಾಗಿದೆ. ಶಾಶ್ವತ ನೇಮಕಾತಿ ಕುರಿತು ಸರ್ಕಾರ ಮುಂದಡಿ ಇಡಬೇಕು.
- ಬಸವರಾಜ ಚಳ್ಳಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಕೋಟ್:
ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ 1,214 ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದ್ದು, ಈಗಾಗಲೇ ಶೇ.75ರಷ್ಟು ನೇಮಕಾತಿ ಮಾಡಲಾಗಿದೆ. ಕೆಲವೆಡೆ ವಿಜ್ಞಾನ ಶಿಕ್ಷಕರ ಕೊರತೆ ಇದ್ದು, ವಾರದೊಳಗೆ ಉಳಿದೆಡೆ ನೇಮಕಾತಿ ಮಾಡಲಾಗುವುದು.
- ಸುರೇಶ ಹುಗ್ಗಿ, ಡಿಡಿಪಿಐ, ಹಾವೇರಿ
ಖಾಲಿ ಹುದ್ದೆಗಳ ತಾಲೂಕಾವಾರು ಅಂಕಿ-ಅಂಶ (ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು)
ತಾಲೂಕು ಮಂಜೂರಾದ ಹುದ್ದೆಗಳು ಹಾಲಿ ಇರುವ ಶಿಕ್ಷಕರು ಖಾಲಿ ಹುದ್ದೆ
ಬ್ಯಾಡಗಿ 728 593 113
ಹಾನಗಲ್ಲ 1471 1093 378
ಹಾವೇರಿ 1166 1015 151
ಹಿರೇಕೆರೂರ 1058 909 149
ರಾಣೆಬೆನ್ನೂರ 1211 1067 144
ಸವಣೂರ 963 690 273
ಶಿಗ್ಗಾಂವಿ 1084 864 220
ಒಟ್ಟು 7,681 6,231 1,450