

ಹಾವೇರಿ: ರಾಜ್ಯ ಸರ್ಕಾರ ಜು.15ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವ ಮೂಲಕ ನಿಮಗೆಲ್ಲ ಸಿಹಿ ಕೊಟ್ಟಿದೆ. ಸರ್ಕಾರಿ ನೌಕರರು ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕೆಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕರೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ನಗರದ ಗುರುಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಾಲ್ಕು ವರ್ಷಗಳಿಂದ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತಸದ ವಿಷಯ. ಸಂಘದ ವಸತಿ ಕೊಠಡಿಗಳ ನವೀಕರಣ ಕಾಮಗಾರಿ ಉತ್ತಮವಾಗಿ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅವರಿಗೆ ಸೂಕ್ತ ಜಮೀನು ಮಂಜೂರು ಮಾಡಲಾಗುವುದು. ಆ ಜಮೀನಿನಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾನು ಅನುದಾನವನ್ನು ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ ಮಾತನಾಡಿ, ಸಂಘಟನೆ ಕಳೆದ ಐದು ವರ್ಷಗಳಲ್ಲಿ ಮಾಡಿದ ಕೆಲಸಗಳ ವರದಿ ಒಪ್ಪಿಸಿದರು. 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ, ಡಿಡಿಪಿಯು ಡಾ.ಎಚ್.ಉಮೇಶಪ್ಪ, ಡಿಡಿಪಿಐ ಸುರೇಶ ಹುಗ್ಗಿ, ಬಿಇಒ ಮೌನೇಶ ಬಡಿಗೇರ, ಎಸ್.ಎಫ್.ಸಿದ್ದನಗೌಡ್ರ, ಸಿದ್ದಣ್ಣ ಯಲಿಗಾರ, ಎಸ್.ಜಿ.ಸುಣಗಾರ, ವಾಚಪ್ಪ ಲಮಾಣಿ, ಸಿ.ಎನ್.ಲಕ್ಕನಗೌಡ್ರ, ಮಲ್ಲಿಕಾರ್ಜುನ ಶಾಂತಗೇರಿ, ಬಸವರಾಜ ಚಳ್ಳಾಳ, ಬಿ.ಎಸ್.ಹಳೇಮನಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಇದ್ದರು.
ಸಂಘದ ಕಾರ್ಯದರ್ಶಿ ಎಂ.ಎ.ಎಣ್ಣಿ ಸ್ವಾಗತಿಸಿದರು. ಸಿ.ಜಿ.ಬ್ಯಾಡಗಿ ವಂದಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.