

ಹಾವೇರಿ: ಬೆಳಕೇ ಇಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ, ಕನಸೇ ಇಲ್ಲದ ದಾರಿಯಲ್ಲಿ ನಡೆಯಲಾಗದು. ವಿದ್ಯಾರ್ಥಿಗಳು ಉನ್ನತ ಗುರಿಗಳನ್ನು ಇಟ್ಟುಕೊಂಡು ಸಾಧನೆಯ ಹಾದಿಯತ್ತ ಹೆಜ್ಜೆ ಹಾಕಬೇಕು ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ನಗರದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಯಾರೂ ಕದಿಯಲಾರದ ಸಂಪತ್ತು ಎಂದರೆ ವಿದ್ಯೆ. ವಿದ್ಯೆ ಗಳಿಸಿದರೆ ಅದು ನಿಮಗೆ ಗೌರವ ತಂದುಕೊಡುತ್ತದೆ. ನೀವು ಎಂತಹ ಕನಸು ಕಾಣಬೇಕೆಂದರೆ ಆ ಕನಸು ನಿಮ್ಮನ್ನು ಮಲಗಲು ಬಿಡಬಾರದು. ಕನಸು ನನಸಾಗುವವರೆಗೂ ವಿರಮಿಸಬಾರದು. ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತನ್ನಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆಗೊಂಡು, ಈ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕು ಎಂದರು.
ಸಹ ಶಿಕ್ಷಕಿ ಪವಿತ್ರಾ ಬಣಕಾರ ಮಾತನಾಡಿದರು. ಸನ್ಮಾನಿತ ವಿದ್ಯಾರ್ಥಿಗಳಾದ ಸೌಮ್ಯ ಹಿರೇಮಠ, ಇಸ್ಮಾಯಿಲ್ ಗಣಜೂರ ಹಾಗೂ ನಾಜರಿನ್ ನೆಗಳೂರ ಮಾತನಾಡಿ, ಶಾಲೆಯ ಶಿಕ್ಷಕರ ಸಹಕಾರ ಹಾಗೂ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ್ದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಯಿತು. ದಿನಕ್ಕೆ 8ರಿಂದ 10 ಗಂಟೆ ಅಧ್ಯಯನ ಮಾಡಿ ಎಂದು ಜೂನಿಯರ್‌ಗಳಿಗೆ ಕಿವಿಮಾತು ಹೇಳಿದರು.
ಸಹಶಿಕ್ಷಕಿ ಲಕ್ಷ್ಮೀ ಕಾಂಬಳೆ ನಿರೂಪಿಸಿದರು. ಮಂಜುಳಾ ಈಳಗೇರ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ, ಪಾಲಕರು, ಮಕ್ಕಳು ಇದ್ದರು.