

ಹಾವೇರಿ: ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅಕ್ಕಿಯಾಗುತ್ತದೆ. ಅಕ್ಕಿಗೆ ಸಂಸ್ಕಾರ ಕೊಟ್ಟರೆ ಅನ್ನ, ಅನ್ನವನ್ನು ಭಗವಂತನಿಗೆ ಅರ್ಪಿಸಿದರೆ ಅದು ಪ್ರಸಾದವಾಗುತ್ತದೆ. ಹೀಗೆ ಸಂಸ್ಕಾರದಿಂದ ವಸ್ತು ಮತ್ತು ವ್ಯಕ್ತಿಗೆ ಶ್ರೇಷ್ಠತೆ ಬರುತ್ತದೆ ಎಂದು ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನೆಯೇ ಮೊದಲ ಪಾಠ ಶಾಲೆ. ಜನನಿ ತಾನೇ ಮೊದಲ ಗುರು ಎನ್ನುವಂತೆ ಮಕ್ಕಳ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುತ್ತದೆ. ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಅಕ್ಷರಾಭ್ಯಾಸ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಮಾತನಾಡಿ, ವಿದ್ಯೆ ಅಣ್ಣ -ತಮ್ಮದಿರು ಪಾಲು ಕೇಳದ, ಕಳ್ಳರಿಂದ ಕದಿಯಲ್ಪಡದ, ತೆರಿಗೆ ರಹಿತ ಶ್ರೇಷ್ಠವಾದ ಸಂಪತ್ತಾಗಿದೆ. ಆದ್ದರಿಂದ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ಕಲಿಸಬೇಕು ಎಂದರು.
ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು.
ವೇದಮೂರ್ತಿ ಶಂಕ್ರಯ್ಯ ಹೊಸಮಠ ಶಾಸ್ತ್ರಿ, ಗಣಪತಿ ಮತ್ತು ಸರಸ್ವತಿ ಪೂಜೆ ಸಲ್ಲಿಸಿದರು. ಶಿಕ್ಷಕಿಯರಾದ ಸರಸ್ವತಿ ಹಿರೇಮಠ, ರೇಷ್ಮಾಬಾನು ನದಾಪ್, ಅಕ್ಷತಾ ಸಾಳುಕೆ, ಲಕ್ಷ್ಮೀ ಕಂಬಾಳಿ, ಜಯಮ್ಮ ಪೂಜಾರ, ಗೀತಾ ಕೋರಿ, ಭಾಗ್ಯಮ್ಮ ವಿಭೂತಿ, ಜಯಲಕ್ಷ್ಮೀ ಪುಟ್ಟಪ್ಪನವರ, ಶೀಲಾ ಹಿರೇಮಠ, ಪೂಜಾ ಮಹಾರಾಜಪೇಟ, ಗೌರಮ್ಮ ಲೋಕಾಪುರ, ಶಾಲಾ ಮಕ್ಕಳು, ಪಾಲಕರು ಉಪಸ್ಥಿತರಿದ್ದರು.
ಶಿಕ್ಷಕಿ ಪೂಜಾ ಮಹಾರಾಜಪೇಟ ಸ್ವಾಗತಿಸಿದರು. ಭವಾನಿ ಮತ್ತು ರಾಜೇಶ್ವರಿ ಪ್ರಾರ್ಥಿಸಿದರು. ಭಾಗ್ಯ ವಿಭೂತಿ ನಿರೂಪಸಿದರು. ಸರಸ್ವತಿ ವಂದಿಸಿದರು.