

ಹಾವೇರಿ: ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕ ಅನೇಕ ಪ್ರಾಂತ ಮತ್ತು ಸಂಸ್ಥಾನಗಳಲ್ಲಿ ಹರಿದು ಹಂಚಿ ಇಪ್ಪತ್ತೆರಡು ತುಂಡುಗಳಾಗಿ ಬೇರೆ- ಬೇರೆ ಆಡಳಿತಕ್ಕೆ ಒಳಪಟ್ಟಿತ್ತು. ಕರ್ನಾಟಕ ಏಕೀಕರಣಗೊಳ್ಳಲು ಸಾಹಿತಿಗಳು, ಪತ್ರಿಕೆಗಳು, ಸಂಘ-ಸಂಸ್ಥೆಗಳು, ಹಲವಾರು ಧುರೀಣರು ಹೋರಾಟ ನಡೆಸಿದರು. ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡು ಕನ್ನಡ ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ, ಶಿಕ್ಷಕಿ ಜಯಮ್ಮ ಪೂಜಾರ ಮಾತನಾಡಿ ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದರು.
ಪುಟಾಣಿ ಮಕ್ಕಳಿಂದ ರಾಜ್ಯೋತ್ಸವ ಭಾಷಣ, ನೃತ್ಯ ಇತ್ಯಾದಿ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕ ಏಕೀಕರಣ ಕುರಿತ ನಾಟಕ ಪ್ರದರ್ಶನ ನೋಡುಗರಲ್ಲಿ ಅಚ್ಚರಿ ಮೂಡಿಸಿತು.
ಚುಟುಕು ಸಾಹಿತ್ಯ ಪರಿಷತ್ತ ಜಿಲ್ಲಾ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಜಯಲಕ್ಷ್ಮೀ ಪುಟ್ಟಪ್ಪನವರ ಸ್ವಾಗತಿಸಿದರು, ಗೌರಮ್ಮ ಲೋಕಾಪುರ ನಿರೂಪಿಸಿದರು. ರೇಷ್ಮಾಬಾನು ನದಾಫ ವಂದಿಸಿದರು.