

ಹಾವೇರಿ: ಹೊಸ ಬೈಕ್ ಖರೀದಿಸಿ, ಊರಿಗೆ ಹೋಗುತ್ತಿದ್ದ ವೇಳೆ ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಭೀಕರ ಅಪಘಾತ ತಾಲೂಕಿನ ಗೌರಾಪುರ ಗ್ರಾಮದ ಬಳಿ ಸೋಮವಾರ ಸಂಭವಿಸಿದೆ.
ಹಾನಗಲ್ಲ ತಾಲೂಕು ವರ್ದಿ ಗ್ರಾಮದ ನಾಗರಾಜ ಶಿವಯೋಗೆಪ್ಪ ಪವಾಡಿ (24) ಹಾಗೂ ಶಂಕರಿಕೊಪ್ಪ ಗ್ರಾಮದ ಮಲ್ಲೇಶ ಮುರಿಗೆಪ್ಪ ದೇವಿಹೊಸೂರ (24) ಮೃತಪಟ್ಟ ಬೈಕ್ ಸವಾರರು.
ನಾಗರಾಜ ಹಾಗೂ ಮಲ್ಲೇಶ ಸಹೋದರ ಸಂಬಂಧಿಗಳು ಇಬ್ಬರೂ ಹಾವೇರಿಯಲ್ಲಿ ಹೊಸ ಯಮಹಾ 220 ಸಿಸಿ ಬೈಕ್ ಖರೀದಿಸಿ, ವರ್ದಿ ಕಡೆಗೆ ಹಾನಗಲ್ಲ ರಸ್ತೆ ಮಾರ್ಗವಾಗಿ ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಮರಳಿನ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಸವಾರನ ಮುಖ ಛಿದ್ರಗೊಂಡಿದೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಧಿಕೃತ ಮರಳಿನ ಟಿಪ್ಪರ್ ?
ಮರಳು ತುಂಬಿಕೊಂಡು ಬಂದಿದ್ದ ಟಿಪ್ಪರ್ (ಕೆಎ 51 ಬಿ 6666) ಆಡೂರಲ್ಲಿ ಅನ್‌ಲೋಡ್ ಮಾಡಿ ವಾಪಸ್ ಗುತ್ತಲ ಕಡೆಗೆ ಹೊರಟಿತ್ತು. ಈ ವೇಳೆ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಟಿಪ್ಪರ್ ಅನುಮತಿ ಪಾಸ್ ಪಡೆಯದೇ ಅನಧಿಕೃತವಾಗಿ ಉಸುಕು ಸಾಗಿಸುತ್ತಿತ್ತು ಎನ್ನಲಾಗಿದೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರು ತನಿಖೆ ಮೂಲಕ ಸ್ಪಷ್ಟಪಡಿಸಬೇಕಿದೆ.