

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಪರಿಣಾಮ ನಾವಿಂದು ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ತಾಯ್ನಡಿಗೆ ತಮ್ಮ ಜೀವ ಮತ್ತು ಜೀವನ ಸವೆಸಿದ ಮಹಾತ್ಮರ ಮತ್ತು ಹುತಾತ್ಮರ ಹೆಸರುಗಳಿಗೆ ಮೆರುಗು ತರುವ, ಅವರ ಹೆಸರು ಚಿರಸ್ಥಾಯಿಯಾಗುವಂತೆ ನಾವೆಲ್ಲರೂ ಮಾಡಬೇಕಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಅರಳಿಕಟ್ಟಿ ಪ್ರಕಾಶನದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಲೇಖಕ ಅರಳಿಕಟ್ಟಿ ಗೂಳಪ್ಪ ರಚನೆಯ ‘ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಹೋರಾಟಗಾರರು ರಾಷ್ಟ್ರೀಯ ನಾಯಕರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಹಾಗಾಗಿ, ಸಹಜವಾಗಿ ಅವರಿಗೆ ರಾಷ್ಟ್ರೀಯ ಪ್ರಜ್ಞೆ ಬೆಳೆಯಲು ಕಾರಣವಾಯಿತು. ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡವರನ್ನು ಇಂದು ಸ್ಮರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕಾಗಿ ರಸ್ತೆ ಮತ್ತು ಉದ್ಯಾನಗಳಿಗೆ ಆಯಾ ಭಾಗದ ಹೋರಾಟಗಾರರ ಹೆಸರಿಡುವುದು ಸೂಕ್ತ. ಅಷ್ಟೇ ಅಲ್ಲದೇ ಪುಸ್ತಕ ಖರೀದಿಸಿ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಖುದ್ದು ಆಸಕ್ತಿ ವಹಿಸಿ ಶಾಸಕರ ನಿಧಿಯಿಂದ ಪುಸ್ತಕ ಖರೀದಿಗೆ ಮುಂದಾಗುತ್ತಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ ಮುರಿಗೆಪ್ಪ ಮಾತನಾಡಿ, ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಅರಳಿಕಟ್ಟಿ ಗೂಳಪ್ಪ ಬರೆದ ಪುಸ್ತಕ ಇತಿಹಾಸ ಅಲ್ಲದಿದ್ದರೂ ಪರಿಚಯಿಸುವ ಮಾಹಿತಿಯನ್ನು ಒಳಗೊಂಡಿದೆ. ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತ ದಾಖಲೀಕರಣ ಅಭಿನಂದನೀಯ ಎಂದರು.
ಸಂಗೂರ ಕರಿಯಪ್ಪ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿ, ನಮ್ಮ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಕೆಲವರು ಸರ್ಕಾರದ ಪಿಂಚಣಿಯನ್ನು ಪಡೆಯಲಿಲ್ಲ. ಕಾರಣ ಕೇಳಿದರೆ ನಾವು ದೇಶಕ್ಕೆ ಸೇವೆ ಮಾಡಿದ್ದೇವೆ ಹೊರತು ಪಿಂಚಣಿ ಬಯಸಿ ಹೋರಾಡಿಲ್ಲ ಎಂದು ಆದರ್ಶ ಮೆರೆದಿದ್ದರು ಎಂದು ನೆನೆದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ನೆಶ್ವಿ ಪುತ್ರಿ ಪಾರ್ವತಿ ಇಂದುಶೇಖರ ಮಾತನಾಡಿದರು.
ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ ಮೈದೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ ಚಿನ್ನಿಕಟ್ಟಿ, ಗ್ರಾಮ ಸ್ವರಾಜ್ ಅಭಿಯಾನದ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಚಿಕ್ಕಮ್ಮ ಆಡೂರ, ಅನಿತಾ ಪಾಟೀಲ, ಪುಷ್ಪಾ ಕಾಖಂಡಕಿ, ಎಸ್.ಜಿ ಮಹಾನುಭಾವಿಮಠ, ಮಾಲತೇಶ ದೊಡ್ಡಮನಿ, ಸಿದ್ಧಲಿಂಗೇಶ ವಳಸಂಗದ, ಲಕ್ಷ್ಮಣ ತಾಳೂರ, ಪ್ರಭುಗೌಡ ಪಾಟೀಲ, ಶಿವಬಸಪ್ಪ ಜಾಬಿನ, ಚನ್ನಬಸಪ್ಪ ಕುದರಿಹಾಳ, ಸುರೇಶ ಹೊಸಮನಿ, ಇತರರು ಉಪಸ್ಥಿತರಿದ್ದರು.
ಗೂಳಪ್ಪ ಅರಳಿಕಟ್ಟಿ ಸ್ವಾಗತಿಸಿದರು. ಸಿದ್ದೇಶ್ವರ ಹುಣಶಿಕಟ್ಟಿಮಠ ವಂದಿಸಿದರು. ಶಶಿಕಾಂತ ರಾಠೋಡ ನಿರೂಪಿಸಿದರು.
62 ಹೋರಾಟಗಾರರ ಮಾಹಿತಿ
ಯಾವುದೇ ಒಂದು ಇತಿಹಾಸ ದಾಖಲಾಗುವ ಹೊತ್ತಿಗೆಯಲ್ಲಿ ದೊಡ್ಡವರ ಜತೆಗೆ ಸಣ್ಣವರ ಮಾಹಿತಿಯೂ ಇರಬೇಕು. ಜಾತಿ ಮೀರಿ ಹೋರಾಡಿದ ನಮ್ಮ ಜಿಲ್ಲೆಯ ಪ್ರಮುಖ 62 ಹೋರಾಟಗಾರರ ಕುರಿತು ನೆನಪಿಸುವ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಕೃತಿ ಸಕಾಲಿಕವಾಗಿ ಪ್ರಕಟವಾಗಿದೆ. ಮುಂದಿನ ಪೀಳಿಗೆಗೆ ಇದೊಂದು ಆಕರ ಗ್ರಂಥವಾಗಬಲ್ಲದು ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.