ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು; ‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಎಡಿಸಿ ವೀರಮಲ್ಲಪ್ಪ ಪೂಜಾರ ಕರೆ

12 HVR 8
Published on

ಹಾವೇರಿ: ಹಲವು ಯುವಕರು ನಶೆ ಅಥವಾ ಮತ್ತು ಭರಿಸುವ ಅಪಾಯಕಾರಿ ಪದಾರ್ಥಗಳನ್ನು ಸೇವಿಸುವ ವ್ಯಸನಗಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಷ್ಟೇ ಅಲ್ಲ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ನಶೆ ಮುಕ್ತರಾಗಿ ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ನಗರದ ಲಕಮಾಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2024ನೇ ಸಾಲಿನ ಸ್ವಾತಂತ್ರ್ಯೋತ್ಸವವನ್ನು ‘ವಿಕಸಿತ ಭಾರತ್ ಕಾ ಮಂತ್ರ, ಭಾರತ್ ಹೋ ನಶೆ ಸೆ ಸ್ವತಂತ್ರ’ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ. ಯುವಕರು ಚಿಕ್ಕ ವಯಸ್ಸಿನಲ್ಲಿ ನಶೆ ತರಿಸುವ ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ ಮತ್ತಿತರ ರಾಜ್ಯಗಳಲ್ಲಿ ಇದು ಮಿತಿಮೀರುತ್ತಿದೆ. ಇದರಿಂದ ಸಮಾಜ ಮತ್ತು ದೇಶದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ. ಅವರು ಮನಸ್ಸು ಮಾಡಿ ವ್ಯಸನಗಳಿಂದ ಮುಕ್ತರಾಗಿ ದೇಶವನ್ನು ಮಾದಕ ವಸ್ತು ವ್ಯಸನಗಳಿಂದ ಮುಕ್ತಗೊಳಿಸಲು ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದ ಕೊನೆಗೆ ಎಡಿಸಿ ಪೂಜಾರ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಭಾರಿ ಪ್ರಾಚಾರ್ಯ ನಾಗರಾಜ ಹಕ್ಕೇರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್, ಎಂ.ಆರ್.ಡಬ್ಲ್ಯೂ ಲಕ್ಷ್ಮವ್ವ ಈಳಗೇರ, ಉಪನ್ಯಾಸಕರಾದ ವಿ.ಟಿ.ಹೊನ್ನಪ್ಪನವರ, ರವಿ ಸಾದರ, ಈಶ್ವರಗೌಡ ಪಾಟೀಲ, ವಿ.ಎಸ್.ಪಾಟೀಲ, ಮಂಜುನಾಥ ಹತ್ತಿಯವರ, ಉಸ್ಮಾನ್, ಇತರರು ಇದ್ದರು. ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net