

ಹಾವೇರಿ: ಮಾನಸಿಕ ಒತ್ತಡ ನಿರ್ವಹಣೆಗಾಗಿಯೋ ಅಥವಾ ಚಟಕ್ಕಾಗಿ ಜನರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿರುವುದರಿಂದ ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಉಂಟಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ತಂಬಾಕಿನಲ್ಲಿರುವ ವಿಷಕಾರಿ ರಾಸಾಯನಿಕಗಳು ಕ್ರಮೇಣ ಜನರ ಆರೋಗ್ಯವನ್ನು ಕಸಿಯುತ್ತಿವೆ. ಜನರು ಇಂತಹ ಚಟಗಳಿಂದ ಮುಕ್ತರಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಾ.ಉಮಾ ಬಳಿಗಾರ ಕರೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಯುವಜನತೆ ತಂಬಾಕು ಮತ್ತು ಗುಟ್ಕಾ ಇತ್ಯಾದಿಗಳನ್ನು ಸೇವಿಸುತ್ತಿರುವುದರಿಂದ ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯನ್ನು ಬರಮಾಡಿಕೊಳ್ಳುತ್ತಿದ್ದಾರೆ. ಹೀಗೆ ತಂಬಾಕು ಉತ್ಪನ್ನಗಳನ್ನು ತಿನ್ನಿಸಿ ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಕಂಪನಿಗಳನ್ನು ನಿಷೇಧಿಸಬೇಕು. ವಿಶೇಷವಾಗಿ ಜನರೇ ಅವರ ಉತ್ಪನ್ನಗಳನ್ನು ತ್ಯಜಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ಕಾಲೇಜ್‌ನ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಯುವಕರೇ ದೇಶದ ಸಂಪತ್ತು. ಅವರ ಆರೋಗ್ಯ ಸದೃಢವಾಗಿದ್ದರೆ ದೇಶದ ಆರೋಗ್ಯವೂ ಸದೃಢವಾಗಿರುತ್ತದೆ. ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿದ್ದು ಇದರ ಸೇವನೆಯಿಂದಾಗುವ ಅಪಾಯಗಳ ಕುರಿತು ಇತರರಿಗೂ ಅರಿವು ಮೂಡಿಸಬೇಕು ಎಂದರು.
ಉಪನ್ಯಾಸಕ ಈಶ್ವರಗೌಡ ಪಾಟೀಲ ಮಾತನಾಡಿ, ನಾವು ತಿನ್ನುವ ಪ್ರತಿಯೊಂದು ಪದಾರ್ಥವು ಕೆಲ ದಿನಗಳ ನಂತರ ನಮ್ಮ ಮನಸ್ಸಾಗಿ ಪರಿವರ್ತನೆಯಾಗುತ್ತದೆ ಎಂಬ ಉಲ್ಲೇಖವಿದೆ. ಉತ್ತಮ ಸಾತ್ವಿಕ ಪದಾರ್ಥಗಳನ್ನು ತಿಂದರೆ ಸಾತ್ವಿಕ ಮನಸ್ಸು ರಚನೆಯಾಗುತ್ತದೆ. ನಶೆ ಏರಿಸುವ ಇಂತಹ ವಿವಿಧ ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುವ ಪರಿಣಾಮ ಆರೋಗ್ಯ ಕುಂಠಿತವಾಗಿ ಕುಟುಂಬ, ಸಮಾಜದಲ್ಲಿ ವಿಕೃತಿಗಳು ನಡೆಯುವ ಸಂಭವವಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ನಾಗರಾಜ ಹಕ್ಕೇರ, ಉಪನ್ಯಾಸಕರಾದ ಎಸ್.ಸಿ.ಮರಡಿ, ಸುನಂದ ಶೀಲಿ, ವಿಶ್ವನಾಥ ಬಿ.ಎನ್., ಮಂಜುನಾಥ ಹತ್ತಿಯವರ, ವಂದನಾ, ವಿಜಯಲಕ್ಷ್ಮೀ ಎಲ್., ಇತರರಿದ್ದರು.
ಮಂಗಳಾ ಎಸ್. ಪ್ರಾರ್ಥಿಸಿದರು. ದೀಪಾ ಲಮಾಣಿ ಸ್ವಾಗತಿಸಿದರು. ಸುಶ್ಮಿತಾ ತಳ್ಳಳ್ಳಿ ನಿರೂಪಿಸಿದರು. ಜ್ಯೋತಿ ಭಜಂತ್ರಿ ವಂದಿಸಿದರು.