

ಹಾವೇರಿ: ಭಕ್ತಿಯು ಆತ್ಮಸಂತೋಷ, ಆತ್ಮ ವಿಕಾಸಕ್ಕೆ ದಾರಿಯಾಗಬೇಕೇ ವಿನಃ ಬೀದಿಯ ಸರಕಾಗಬಾರದು ಎಂದು ಸಂತಕವಿ, ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಭಾರತೀಯ ಭಕ್ತಿ ಪರಂಪರೆ ಮತ್ತು ಕರ್ನಾಟಕ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಕ್ತಿ ಪರಂಪರೆಯು ಶಾಸ್ತ್ರಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ನೋಡುವ ಬದಲು ಜನ ಮಿಮಾಂಸೆಯ ಹಿನ್ನೆಲೆಯಲ್ಲಿ ಅವಲೋಕಿಸಬೇಕು. ಸಮಾಜದಲ್ಲಿನ ತಾರತಮ್ಯ, ಶ್ರೇಷ್ಠ- ಕನಿಷ್ಠ, ಮೇಲು-ಕೀಳು, ಯುದ್ಧದಂತಹ ಸಂದಿಗ್ಧ ಸ್ಥಿತಿಯಲ್ಲಿ ಭಾರತೀಯ ಭಕ್ತಿಪಂಥವು ಎದುರುಗೊಂಡಿತ್ತು ಎಂದರು.
ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ ಭಾಸ್ಕರ ಮಾತನಾಡಿ, ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ದೇವರು, ಭೂತ, ಆತ್ಮದ ಕುರಿತಾಗಿ ಚರ್ಚೆ ನಡೆದಿದೆ. ಭಕ್ತಿ ಎನ್ನುವುದು ಸಂಕೀರ್ಣವಾದ ವಿಷಯ. ಈ ಭಕ್ತಿ ಚಳವಳಿ ಎನ್ನುವುದು ಸರ್ವವ್ಯಾಪಕವಾಗಿದೆ. ಭಕ್ತಿ ಪಂಥದ ನಿಲುವುಗಳು ಭಿನ್ನ ಭಿನ್ನವಾದ ಹರಿವುಗಳನ್ನು ಒಳಗೊಂಡಿದೆ. ಇಡೀ ಭಕ್ತಿ ಪರಂಪರೆಯನ್ನು ಅವಲೋಕಿಸಿದಾಗ ತಳಸಮುದಾಯದ ಪಾತ್ರ ಗಣನೀಯವಾದುದು ಎಂದರು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಟಿ ಬಾಗಲಕೋಟಿ ಮಾತನಾಡಿ, ಭಕ್ತಿಯ ಹಲವು ಪ್ರಕಾರಗಳ ಜತೆಯಲ್ಲಿ ಇಂದು ನಾವು ಪರಿಸರ ಭಕ್ತಿಯನ್ನು ಸೇರಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ ಕೊಳ್ಳಿ ವಹಿಸಿದ್ದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಸದಸ್ಯ ಕಾರ್ಯದರ್ಶಿ ಕರಿಯಪ್ಪ ಎನ್, ಡಾ. ಗುರುಪಾದ ಮರಿಗುದ್ದಿ, ಶ್ರೀಧರ ಹಗಡೆ ಭದ್ರನ್, ಡಾ.ತಮಿಳ್ ಸೆಲ್ವಿ, ಡಾ.ಗೀತಾ ವಸಂತ, ಡಾ.ಕಾಂತೇಶ ಅಂಬಿಗೇರ, ಡಾ.ಗುಂಡೂರು ಪವನಕುಮಾರ, ಡಾ.ಭಾರತಿದೇವಿ, ಡಾ.ಶಿವರಾಮ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜ್‌ನ ಪ್ರಾಂಶುಪಾಲ ಪ್ರೊ.ದೀಪಕ ಕೊಲ್ಹಾಪುರೆ ಸ್ವಾಗತಿಸಿದರು, ಸಂಘಟನಾ ಕಾರ್ಯದರ್ಶಿ ಡಾ.ಸಂಜೀವ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಶ್ರೀದೇವಿ ದೊಡ್ಡಮನಿ ನಿರೂಪಿಸಿದರು, ಪ್ರೊ.ಹೇಮಂತ ಸಿ.ಎನ್ ವಂದಿಸಿದರು.