ಮಹಿಳೆಯರು ಸಾಧನೆಯ ಬೆನ್ನು ಹತ್ತಬೇಕು; ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಂಕಮ್ಮ ಸಂಕಣ್ಣನವರ ಕರೆ

16 HVR 9
Published on

ಹಾವೇರಿ: ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ ಕಳೆಯುತ್ತಿರುವ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ. ವಿಶೇಷವಾಗಿ ಮಹಿಳೆಯರು ಸಾಧನೆಯ ಬೆನ್ನು ಹತ್ತಿ ಸಾಧಕರಾಗಬೇಕು. ಸಂಸಾರದಲ್ಲೂ ಯಶಸ್ವಿಯಾಗಬೇಕು ಎಂದು ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಂಕಮ್ಮ ಸಂಕಣ್ಣನವರ ಕರೆ ನೀಡಿದರು.

ನಗರದಲ್ಲಿ ಗೆಳೆಯರ ಬಳಗ, ಸೃಷ್ಟಿ ಪೌಂಡೇಶನ್ ಹಾಗೂ ಸಾಹಿತಿ ಕಲಾವಿದರ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಇಟ್ಟುಕೊಂಡು. ಪ್ರತಿದಿನವೂ ಅದನ್ನು ಕಾರ್ಯಗತಗೊಳಿಸಲು ಶ್ರಮಪಡಿ. ಸಾಧನೆ ಯಾರೊಬ್ಬರ ಸ್ವತ್ತಲ್ಲ ಎಂದು ಸಲಹೆ ನೀಡಿದರು.

ಜಾನಪದ ವಿದ್ವಾಂಸ ಶಂಭು ಬಳಿಗಾರ ಮಾತನಾಡಿ, ಪ್ರಶಸ್ತಿಗಳಿಗೆ ಪ್ರಯತ್ನಗಳು ಇಲ್ಲದಿದ್ದರೂ, ಅರ್ಹರ ಪರವಾಗಿ ಯಾರಾದರೂ ಆಯ್ಕೆ ಸಮಿತಿಯಲ್ಲಿ ಮಾತನಾಡುವವರ ಅಗತ್ಯದ ವಾತಾವರಣ ನಿರ್ಮಾಣಗೊಂಡಿದೆ. ಸಂಕಮ್ಮ ತಮ್ಮ ಸಾಹಿತ್ಯ ಸಾಧನೆಯ ಮೂಲಕ ಪುರಸ್ಕೃತರಾಗಿದ್ದಾರೆ. ವಿರೂಪಾಕ್ಷ ಹಾವನೂರ ಅವರು ಸಾಹಿತ್ಯದ ಪರಿಚಾರಕರಾಗಿ ಅರ್ಹರಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು, ಇದು ಹಾವೇರಿ ನೆಲಕ್ಕೆ ಸಂದ ಗೌರವ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾವೇರಿಯ ಹಾವನೂರ ಪ್ರತಿಷ್ಠಾನದ ವಿರೂಪಾಕ್ಷ ಹಾವನೂರ ಮತ್ತು ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರನ್ನು ಸನ್ಮಾನಿಸಲಾಯಿತು.

ಕಲಾ ಬಳಗದ ಸಂಚಾಲಕ ಎಸ್.ಆರ್.ಹಿರೇಮಠ, ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿದರು.

ಗೆಳೆಯರ ಬಳಗದ ಅಧ್ಯಕ್ಷ ಡಾ.ಸುದೀಪ ಪಂಡಿತ, ವಿ.ಎಂ.ಪತ್ರಿ, ವಿಜಯಕುಮಾರ ಮುದಕಣ್ಣನವರ, ಚಂದ್ರಶೇಖರ ಮಾಳಗಿ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಇತರರು ಇದ್ದರು.

ಪರಿಮಳಾ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ.ಆರ್.ಹಿರೇಮಠ, ಮಹಾಂತೇಶ ಮರಿಗೂಳಪ್ಪನವರ, ಅಕ್ಕಮಹಾದೇವಿ ಹಾನಗಲ್ಲ, ಎ.ಬಿ., ಗುಡ್ಡಳ್ಳಿ ಮುಂತಾದವರು ಜಾಗೃತಿ ಗೀತೆಗಳನ್ನು ಹಾಡಿದರು. ಸೃಷ್ಟಿ ಫೌಂಡೇಶನ್‌ನ ಸುಭಾಸ ಹುಲ್ಯಾಳದ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net