ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠದ ಮಾದರಿಯಲ್ಲಿ ಕತೃ ಗದ್ದುಗೆ ಅಭಿವೃದ್ಧಿ; ಮಂಜುನಾಥ ಭೋವಿ

Published on

ಹಾವೇರಿ: ಚೌಡಯ್ಯದಾನಪುರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠದ ಮಾದರಿಯಲ್ಲಿ ಕತೃ ಗದ್ದುಗೆ ಅಭಿವೃದ್ಧಿಪಡಿಸಲಾಗುವುದು. ಈ ಬಗ್ಗೆ ಯಾರ ಮಾತಿಗೂ ಸಮಾಜದವರು ಕಿವಿಗೊಡದೇ ಸಹಕರಿಸಬೇಕು ಎಂದು ಜಿಲ್ಲಾ ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಮಂಜುನಾಥ ಭೋವಿ ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಂಬಿಗರ ಚೌಡಯ್ಯನವರ ಗುರುಪೀಠ ಸಮಾಜದ ಏಕೈಕ ಪೀಠವಾಗಿದೆ. ಅಂಬಿಗರ ಚೌಡಯ್ಯನವರ ಗುರುಪೀಠದ ಅಭಿವೃದ್ಧಿ ಹಾಗೂ ಕತೃ ಗದ್ದುಗೆ ಅಭಿವೃದ್ಧಿ ಮಾಡುವ ಸಂಬಂಧ ಸರ್ಕಾರಕ್ಕೆ ಸಾಕಷ್ಟು ಮನವಿ ಸಲ್ಲಿಸಲಾಗಿದೆ. ಸಮಾಜದ ನಿರಂತರ ಹೋರಾಟದ ಫಲವಾಗಿ 2013-14ರಲ್ಲಿ ಪೀಠದ ಅಭಿವೃದ್ಧಿಗಾಗಿ 32 ಕೋಟಿ ರೂ. ಅನುದಾನ ಹಾಗೂ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ ಎಂದರು.

ಆದರೆ ಸರ್ಕಾರದಿಂದ ಮಂಜೂರಾದ ಅನುದಾನ ಕಾರಣಾಂತರಗಳಿಂದ ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಹಿಂದಕ್ಕೆ ಹೋಗಿದ್ದು, ಗದ್ದುಗೆ ಅಭಿವೃದ್ಧಿಪಡಿಸಲು ಆಗಿಲ್ಲ. ಮೇಲಾಗಿ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ 100 ಮೀ.ವರೆಗೆ ಯಾವುದೇ ಕೆಲಸ ಮಾಡಿಸಲು ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು, ಸಚಿವರುಗಳು ಅವೇಶನದಲ್ಲಿ ಚರ್ಚಿಸಿ, ಸರಕಾರದ ಗಮನಕ್ಕೆ ತಂದಿದ್ದಾರೆ. ಕಾನೂನು ಸಚಿವ ಎಚ್.ಕೆ ಪಾಟೀಲರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸಮಾಜದ ಅಭಿವೃದ್ಧಿ ಸಹಿಸದ ಕೆಲವರು, ‘ಕೇವಲ ಗುರುಪೀಠದ ಅಭಿವೃದ್ಧಿ ಮಾಡುತ್ತಾ ಹೋಗುತ್ತಿದ್ದಾರೆ. ಆದರೆ ಚೌಡಯ್ಯದಾನಪುರದಲ್ಲಿರುವ ಗದ್ದುಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ’ ಎಂದು ಆರೋಪಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಗಂಗಾಮತಸ್ಥ ಸಮಾಜ ಒಗ್ಗಟ್ಟಿನಿಂದ ಕೂಡಿದೆ. ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಬದ್ದವಾಗಿದ್ದು, ಶಾಂತಬೀಷ್ಮ ಚೌಡಯ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತಿದ್ದೇವೆ. ಪೀಠ ಎರಡೂ ಸ್ಥಳಗಳ ಅಭಿವೃದ್ಧಿ ಮಾಡುತ್ತಾ ಸಮಾಜದ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರವೀಣ ವಡ್ನಿಕೊಪ್ಪ, ರಾಮಚಂದ್ರಪ್ಪ ಐರಣಿ, ಎಚ್.ಎಂ ದಂಡಿನ, ಕರಬಸಪ್ಪ ಹಳದೂರ, ನಾಗಪ್ಪ ಶೇಷಗಿರಿ, ಅಣ್ಣಪ್ಪ ಚಾಕಾಪುರ, ಮಾಲತೇಶ ತಿಪ್ಪೆಗುಂಡಿ, ನಿಂಗಪ್ಪ ಹೆಗ್ಗಣ್ಣವರ, ಕಾಳಪ್ಪ ಅಂಬಿಗೇರ, ಕೋಟ್ರೇಶಪ್ಪ ಕುದರಿಹಾಳ, ಪರಮೇಶಪ್ಪ ಚಿಕ್ಕಮ್ಮನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net