ಶ್ರೀ ಗಂಗಾಪರಮೇಶ್ವರಿ ದೇಗುಲ ಉದ್ಘಾಟನೆ ಪೂರ್ವಭಾವಿ ಸಭೆ

Published on

ಹಾವೇರಿ: ನಗರದ ನೀಲನಗೌಡ್ರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ದೇಗುಲದಲ್ಲಿ ಸೆ.13ರಿಂದ 15ರವರೆಗೆ ಹಮ್ಮಿಕೊಂಡಿರುವ ಶ್ರೀ ಗಣೇಶ, ಶ್ರೀ ಗಂಗಾಪರಮೇಶ್ವರಿ, ಶ್ರೀ ಬನ್ನಿ ಮಹಾಕಾಳಿದೇವಿ ಮೂರ್ತಿ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿತು.
ಸಭೆಯಲ್ಲಿ ಕಾರ್ಯಕ್ರಮದ ಸ್ವರೂಪ, ನಿರ್ವಹಣೆ ಹಾಗೂ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು. ಸೆ.13ರಂದು ಸಂಜೆ 5 ಗಂಟೆಗೆ ಮೆರವಣಿಗೆ, ಜಲಾಧಿವಾಸ, ಸೆ.14ರಂದು ಧಾನ್ಯಾಧಿವಾಸ, ಸೆ.15ರಂದು ವಿಶೇಷ ಪೂಜೆಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ, ಹೋಮ ಹವನ, ಇತರ ಕಾರ್ಯಕ್ರಮಗಳು ನೆರವೇರಲಿವೆ. ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹಾಗೂ ಕರ್ಜಗಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ ತಿಳಿಸಿದರು.
ಸಭೆಯಲ್ಲಿ ಸಮಾಜದ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜಯ ಸುಣಗಾರ, ಪ್ರಮುಖರಾದ ಶಂಕರ ಸುತಾರ, ಸುರೇಶ ಬ್ಯಾಲಹುಣಸಿ, ನಿಂಗಪ್ಪ ಹೆಗ್ಗಣ್ಣನವರ, ಬಿ.ಎಫ್.ಹುಡೇದ, ಸಮಾಜದ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net