

ಹಾವೇರಿ: ವಿಘ್ನಗಳ ನಿವಾರಕ, ಮೋದಕ ಪ್ರಿಯ, ಗೌರಿಸುತ ಗಣೇಶ ಹಬ್ಬದ ಸಡಗರ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಮನೆ, ಸರ್ಕಾರಿ, ಖಾಸಗಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಭಕ್ತರು ಬಗೆ ಬಗೆಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಶ್ರೀರಾಮ, ಈಶ್ವರ, ಕೃಷ್ಣ, ಬಾಲಗಣಪ, ಪಂಚಮುಖಿ ಗಣೇಶ, ಶಿವರೂಪಿ ಗಣೇಶ, ಸಾಯಿರೂಪಿ ಗಜಾನನ, ನಂದಿರೂಢ ಏಕದಂತ, ವಿಷ್ಣುರೂಪಿ ವಕ್ರತುಂಡ, ಹೀಗೆ ತರಹೇವಾರಿ ರೂಪದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಶನಿವಾರ ಬೆಳಗ್ಗೆಯಿಂದಲೇ ದೇವಸ್ಥಾನ, ಮೂರ್ತಿ ತಯಾರಕರ ಮನೆಗಳಿಂದ ಶುಭ್ರ ವಸ್ತ್ರಧಾರಿಗಳಾಗಿ, ಪಟಾಕಿ ಸಿಡಿಸಿ, ವಾದ್ಯ ವೈಭವಗಳೊಂದಿಗೆ ಗಣೇಶ ಮೂರ್ತಿಗಳನ್ನು ಮನೆಗೆ ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಹಾನಗಲ್ಲ, ಸವಣೂರು, ಬ್ಯಾಡಗಿ, ಶಿಗ್ಗಾಂವಿ ಸೇರಿದಂತೆ ನಗರ, ಪಟ್ಟಣ, ಹಳ್ಳಿಗಳ ವಿವಿಧ ವೃತ್ತಗಳಲ್ಲಿ, ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಬೃಹತ್ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ವಿದ್ಯುತ್ ದೀಪಾಲಂಕಾರ
ಹಾವೇರಿ ನಗರದ ಪ್ರಮುಖ ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಶಾಮಿಯಾನ ಹಾಕಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಸುಭಾಸ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಾತ್ರದ ‘ಹಾವೇರಿ ಕಾ ರಾಜಾ’ ಗಣಪ ಎಲ್ಲರನ್ನು ಆಕರ್ಷಿಸುತ್ತಿದೆ. ಸ್ಥಳೀಯ ಅಶ್ವಿನಿ ನಗರದ ಸಿಂಹಾಸನಾರೂಢ ಗಣೇಶ, ನಗರದ ಕಲ್ಲುಮಂಟಪ ರಸ್ತೆಯ ಬಿಲ್ಲು-ಬಾಣ ಹಿಡಿದು ನಿಂತಿರುವ ಗಣೇಶ ಮೂರ್ತಿ, ಬಸವೇಶ್ವರ ನಗರದ ಸಿಂಹಾಸನರೂಢ ಗಣೇಶ, ಪುರದ ಓಣಿಯ ನಂದಿ ಮೇಲೆ ಕುಳಿತಿರುವ ಗಣೇಶ, ಸೇರಿದಂತೆ ವಿವಿಧ ಗಣೇಶ ಮಂಟಪಗಳು ಜಗಮಗಿಸುತ್ತಿವೆ.