

ಹಾವೇರಿ: ಪ್ರಥಮ ಪೂಜಿತ, ವಿಘ್ನ ನಿವಾರಕ ಶ್ರೀ ಗಣೇಶ ಚತುರ್ಥಿ ಆಚರಣೆಗೆ ಜಿಲ್ಲೆಯಾದ್ಯಂತ ಭಕ್ತಗಣ ಕಾತರರಾಗಿದ್ದು, ಗಣಪನ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳು ವಿದ್ಯುತ್ ದೀಪಾಲಂಕಾರ, ಕೇಸರಿ ಧ್ವಜಗಳಿಂದ ಕಳೆಗಟ್ಟಿವೆ.
ಗಣೇಶ ಹಬ್ಬ ಎಂದರೆ ಹಿಂದುಗಳಿಗೆ ಎಲ್ಲಿಲ್ಲದ ಸಡಗರ. ಹಬ್ಬ ಆಚರಣೆಗೆ ವಾರಕ್ಕೂ ಮೊದಲೇ ತಯಾರಿ ಆರಂಭಿಸಿರುತ್ತಾರೆ. ಮಣ್ಣಿನ ಗಣೇಶ ಮೂರ್ತಿ ಆರ್ಡರ್ ಮಾಡುವುದು. ಅದಕ್ಕೆ ಬೇಕಾದ ಅಲಂಕಾರಿಕ ವಸ್ತು ಖರೀದಿಸುವುದು. ಬಂಧು, ಬಳಗವನ್ನು ಆಹ್ವಾನಿಸುವುದು, ಹೀಗೆ ಹತ್ತಾರು ಕೆಲಸಗಳನ್ನು ಈಗಾಗಲೇ ಜನತೆ ಮಾಡಿಕೊಂಡಿದ್ದಾರೆ.
ಶನಿವಾರ ಗಣೇಶ ಹಬ್ಬದಂದು ಗಣೇಶನ ಮೂರ್ತಿ ತಂದು ಪ್ರತಿಷ್ಠಾಪನೆ ಮಾಡುವುದು, ವಿಶೇಷ ಪೂಜೆ, ಪ್ರಾರ್ಥನೆ ಮಾಡಲು ಸಕಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಹಿರಿಯರು, ಮಕ್ಕಳು ಹೊಸ ಬಟ್ಟೆ, ಪಟಾಕಿ ಖರೀದಿಸಿ, ಹಬ್ಬಕ್ಕಾಗಿ ಕ್ಷಣಗಳನ್ನು ಎಣಿಸುತ್ತಿದ್ದಾರೆ.
ಇನ್ನು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ತಯಾರಾಗಿವೆ. ಬೃಹತ್ ಪೆಂಡಾಲ್ ಅಳವಡಿಸಿ ಗಣೇಶನಿಗಾಗಿ ಬಗೆ ಬಗೆಯ ಅಲಂಕೃತ ವೇದಿಕೆಗಳನ್ನು ಸಿದ್ಧಪಡಿಸಿರುವ ಯುವ ಪಡೆ, ಬೆಳಗ್ಗೆಯಿಂದ ರಾತ್ರಿವರೆಗೂ ಮೆರವಣಿಗೆ ಮೂಲಕ ಗಣೇಶನ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಲಂಕಾರಿಕ ವಸ್ತುಗಳಿಗೆ ಡಿಮಾಂಡ್
ಗಣೇಶೋತ್ಸವಕ್ಕೆ ಅಲಂಕೃತ ವಸ್ತುಗಳಿಗೆ ಭಾರಿ ಡಿಮಾಂಡ್ ಬಂದಿದೆ. ಗಣೇಶನ ಪ್ರತಿಷ್ಠಾಪನೆಗಾಗಿ ಜನ ವಿದ್ಯುತ್ ದೀಪ, ಪರಪರೆ ಹಳಿ, ಮಂಟಪ, ಹೂಮಾಲೆ, ಸೇರಿ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ಖರೀದಿಸುವಲ್ಲಿ ನಿರತಾಗಿದ್ದರು. ಹಾವೇರಿ ನಗರ ಸೇರಿ ಜಿಲ್ಲೆಯ ಎಲ್ಲ ಮಾರುಕಟ್ಟೆಗಳು ಶುಕ್ರವಾರ ಜನದಟ್ಟಣೆಯಿಂದ ಕೂಡಿದ್ದವು. ನಾಳೆ ಹಬ್ಬ ಇರುವ ಕಾರಣ ಇಂದು ವ್ಯಾಪಾರ ಚೆನ್ನಾಗಿ ನಡೆದಿದೆ ಎಂದು ವ್ಯಾಪಾರಿ ಬಸವರಾಜ ಜಾಬಿನ್ ಹೇಳಿದರು.