ಹಾವೇರಿ: ಗಣೇಶ ಚತುರ್ಥಿ ಅಂಗವಾಗಿ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸೆ.16ರಿಂದ ಸೆ.30ರವರೆಗೆ ಪಟಾಕಿ ಮಾರಾಟ ಮಾಡಲು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಕೇವಲ ಹಸಿರು ಪಟಾಕಿಗಳನಷ್ಟೇ ತಾತ್ಕಾಲಿಕ ಶೆಡ್‌ಗಳನ್ನು ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ನಿರ್ಮಿಸಿಕೊಳ್ಳಬೇಕು. ಎಲ್ಲ ಸುರಕ್ಷರತಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರಿಂದ ಪ್ರತ್ಯೇಕ ಅನುಮತಿ, ನಿರಪೇಕ್ಷಣಾ ಪತ್ರ ಪಡೆದುಕೊಂಡು ಮಾರಾಟ ಮಾಡಲು ಆದೇಶಿಸಲಾಗಿದೆ.
ಎಲ್ಲೆಲ್ಲಿ ಅವಕಾಶ ?
ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಹೊಸರಿತ್ತಿ ಗ್ರಾಮದ ಶಿರಡಿ ನಗರ ಪ್ಲಾಟ್, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಾಲೂಕು ಕ್ರೀಡಾಂಗಣ, ಹಿರೇಕೆರೂರ ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮ ಪಂಚಾಯಿತಿ ಆಸ್ತಿ ನಂ.1086/21ರ ಖುಲ್ಲಾ ಜಾಗೆ, ಹಂಸಭಾವಿ ಗ್ರಾಮ ಸರ್ವೇ ನಂ.147/4 ಆಸ್ತಿ ನಂ.1075/ಎ ಖುಲ್ಲಾ ಜಾಗ, ಶಿಗ್ಗಾಂವಿ ಪುರಸಭೆ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಯಲು ಜಾಗ, ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ಸವಣೂರ ಹಾಗೂ ಹಾನಗಲ್ಲ ತಾಲೂಕು ಕ್ರೀಡಾಂಗಣ, ರಟ್ಟಿಹಳ್ಳಿ ಪಟ್ಟಣದ ಸ.ನಂ.87,88 ಖುಲ್ಲಾ ಜಾಗ, ಮಾಸೂರ ಗ್ರಾಮದ ಸ.ನಂ 982/ಎ ಖುಲ್ಲಾ ಜಾಗ ಹಾಗೂ ಹಿರೇಮೊರಬ ಗ್ರಾಮದ ಸ.ನಂ.147/2 ಖುಲ್ಲಾ ಜಾಗದಲ್ಲಿ ನಿಗದಿಪಡಿಸಲಾಗಿದೆ.