ಅಗಲಿದ ಪುತ್ರನ ನೆನಪಿಗಾಗಿ ಗೋಶಾಲೆ; ಶೋಕದಲ್ಲೂ ಹೆತ್ತವರ ಮಾದರಿ ಕಾರ್ಯ

21 HVR 1 A
Published on

ಹಾವೇರಿ: ಎದೆಯುದ್ದ ಬೆಳೆದ ಮಕ್ಕಳು ಕಣ್ಣುದುರೇ ಮೃತಪಟ್ಟರೆ ಹೆತ್ತವರ ಸಂಕಟ ಹೇಳತೀರದು. ಇಂತಹದ್ದೇ ಒಂದು ಪುತ್ರಶೋಕದ ಸಂಕಟದಲ್ಲಿ ಸಿಲುಕಿರುವ ಹಾವೇರಿಯ ಪಾಲಕರು ತಮ್ಮ ಮಗನ ನೆನಪಿಗಾಗಿ ತಾಲೂಕಿನ ಗಾಂಧೀಪುರ ಬಳಿ ಗೋಶಾಲೆ ಆರಂಭಿಸುವ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ. ನಗರದ ಅನೀಲ ಕೂಸನೂರ ಮತ್ತು ಸಂಗೀತಾ ಶೇಟ್ ದಂಪತಿಯ ಹಿರಿಯ ಪುತ್ರ ಸಂದೇಶ ಶೇಟ್ ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೆ ಬೆಳಗಾವಿ ಜಿಲ್ಲೆ ಕಿತ್ತೂರ ಬಳಿ ರಸ್ತೆ ಅಪಘಾತದಲ್ಲಿ ಸಂದೇಶ ಇಹಲೋಕ ತ್ಯಜಿಸಿದ್ದ. ಪುತ್ರನ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಪಾಲಕರಿಗೆ ಈ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಮಗನ ಬಗ್ಗೆ ಕಂಡಿದ್ದ ಕನಸುಗಳು ನುಚ್ಚು ನೂರಾದವು. ಮಗ ಶಾಶ್ವತವಾಗಿ ಕಣ್ಮರೆಯಾದ ದುಖಃದಲ್ಲೂ ಮಗನ ಹೆಸರು ಚಿರಸ್ಥಾಯಿಯಾಗಿಸುವ ಸದುದ್ದೇಶದಿಂದ ಪಾಲಕರು ಮಗ ಸಂದೇಶನ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಚಿಂತನೆ ನಡೆಸಿದರು. ಅದಕ್ಕಾಗಿ 27 ಲಕ್ಷ ರೂ. ಕೊಟ್ಟು ಒಂದು ಎಕರೆ ಜಮೀನು ಖರೀದಿಸಿ, ಬೃಹತ್ ಶೆಡ್ ನಿರ್ಮಿಸಿದರು. ಅದರಲ್ಲಿ ಅನಾಥ, ವಯಸ್ಸಾದ ದನ, ಕರು, ಆಕಳುಗಳಿಗೆ ಆಶ್ರಯ ನೀಡುವ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಮಗನ ಜನ್ಮದಿನದಂದು ನ.20ರಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ಗೋಶಾಲೆಗೆ ಚಾಲನೆ ನೀಡಿದರು. ಸಂದೇಶನ ಕುಟುಂಬದವರು, ಬಂದು, ಬಳಗ, ಸ್ನೇಹಿತರು ಈ ಮಹತ್ಕಾರ್ಯಕ್ಕೆ ಸಾಕ್ಷಿಯಾದರು.

ಕೋಟ್:

33 ಕೋಟಿ ದೇವತೆಗಳಿರುವ ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಶ್ರೇಷ್ಠ ಸ್ಥಾನವಿದೆ. ಈ ದಂಪತಿಯ ಸಾಮಾಜಿಕ ಸೇವೆ ಅನುಕರಣೀಯವಾಗಿದೆ. ಅನಾಥ ಗೋವುಗಳಿಗೆ ಇದು ಆಶ್ರಯ ತಾಣವಾಗಲಿ. ಗೋರಕ್ಷಣೆಗೆ ಸಂಕಲ್ಪ ತೊಟ್ಟಿರುವ ಇವರಿಗೆ ಶುಭವಾಗಲಿ.

> ಶ್ರೀ ಸದಾಶಿವ ಸ್ವಾಮೀಜಿ, ಹುಕ್ಕೇರಿ ಮಠ

ಕೋಟ್:

ಮಗನನ್ನು ಕಳೆದುಕೊಂಡಿರುವ ತಾಯಿ ಕರುಳಿಗೆ ಬಹಳ ನೋವುಂಟಾಗಿದೆ. ಗೋಶಾಲೆ ನಿರ್ಮಿಸಿ, ಆಕಳು, ಕರುಗಳನ್ನು ಮಗನಂತೆ ಆರೈಕೆ ಮಾಡಬೇಕು ಎಂದು ಅನಿಸಿತು. ಈ ಗೋವುಗಳಲ್ಲೇ ಮಗನನ್ನು ಕಾಣುತ್ತಿದ್ದೇನೆ. ಮಗನ ಜನ್ಮದಿನದಂದು ಈ ಗೋಶಾಲೆ ಆರಂಭಿಸಿದ್ದೇವೆ.
> ಸಂಗೀತಾ ಶೇಟ್, ಸಂದೇಶ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net