

ಹಾವೇರಿ: ತಾಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಪೂರೈಸಿರುವ ರೇಶನ್‌ನಲ್ಲಿ ಹುಳ, ಕಸ, ಕಡ್ಡಿ ತುಂಬಿಕೊಂಡಿದ್ದು, ಇದರ ವಿರುದ್ಧ ಹಾಸ್ಟೆಲ್ ಎದುರು ಮಂಗಳವಾರ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ಗೆ ಪೂರೈಕೆಯಾಗಿರುವ ಅಕ್ಕಿ, ಬೇಳೆ, ತರಕಾರಿ, ಇತರ ಪದಾರ್ಥಗಳಲ್ಲಿ ಹುಳ, ಕಸ, ಕಡ್ಡಿ ತುಂಬಿಕೊಂಡು ಸೇವನೆಗೆ ಯೋಗ್ಯವಾಗಿಲ್ಲ. ಜತೆಗೆ ಮೂಲ ಸೌಕರ್ಯಗಳನ್ನೂ ಕೊಟ್ಟಿಲ್ಲ. ಇದನ್ನು ಪ್ರಶಸ್ನಿಸುವ ವಿದ್ಯಾರ್ಥಿಗಳನ್ನು ವಾಡ್ನ್ ಟಾರ್ಗೆಟ್ ಮಾಡಿ, ಪಾಲಕರಿಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುವ ಹಾಸ್ಟೆಲ್ ವಾರ್ಡನ್ ಅಮಾನತಿಗೆ ಆಗ್ರಹಿಸಿದರು.
ಗುಣಮಟ್ಟದ ಆಹಾರ ನೀಡುವುದಿಲ್ಲ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಆಟದ ಸಲಕರಣೆಗಳು ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕು ಅಧಿಕಾರಗಳಿಗೆ ಅನೇಕ ಬಾರಿ ಮನವಿ ಪತ್ರ ಬರೆಯಲಾಗಿದೆ ಹಾಗೂ ಕಳೆದ ವರ್ಷ ಹೋರಾಟವನ್ನೂ ಮಾಡಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳದೇ ಕೇವಲ ಭರವಸೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಾರ್ಡನ್ ತಾನು ಮಾಡಿದ ಭ್ರಷ್ಟಾಚಾರ, ಅವ್ಯವಸ್ಥೆ, ಅನ್ಯಾಯವನ್ನು ಮುಚ್ಚಿಕೊಳ್ಳಲು ವಿದ್ಯಾರ್ಥಿಗಳ ಮನೆಗೆ ಹೋಗಿ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ವಾರ್ಡನ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಆಂಜನೇಯ ಆಗಮಿಸಿ, ಪರಿಶೀಲಿಸಿದರು. ವಾರ್ಡನ್ ವಿರುದ್ಧದ ಆರೋಪದ ಕುರಿತು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಹಾಸ್ಟೆಲ್ ಘಟಕದ ಅಧ್ಯಕ್ಷ ಪರಶುರಾಮ ಕೊಪ್ಪಳದ, ಮಂಜುನಾಥ ಹುಲಮನಿ, ವಸಂತ ವಡ್ಡರ, ರಘುಪತಿ ಕರಮ್ಮನವರ, ಅರುಣ ಮಿನಕಟ್ಟಿ, ಕೃಷ್ಣ ಕೆಸರಹಳ್ಳಿ, ಕುಶಾಲ ಲಮಾಣಿ, ಸುನಿಲ ಲಮಾಣಿ, ನಾಗೇಂದ್ರ ಎಂ., ಕಿರಣ ಲಮಾಣಿ, ನವೀನ ಬಡ್ಡೆಪ್ಪನವರ, ಅರುಣ ಕುಮಾರ ನಾಗವತ, ಇತರರಿದ್ದರು.