

ಹಾವೇರಿ: ತಾಲೂಕಿನ ಗಾಂಧಿಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಸತಿ ನಿಲಯದ ಎದುರು ವಿದ್ಯಾರ್ಥಿಗಳು ಮಂಗಳವಾರ ಅಡುಗೆ ತಯಾರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ವಸತಿ ನಿಲಯದಲ್ಲಿ ಸರಿಯಾದ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ವ್ಯವಸ್ಥೆ ಇಲ್ಲ. ಮೇಲ್ಚಾವಣಿ ಸೇರಿದಂತೆ ಹಾಸ್ಟೆಲ್ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಕಿಟಕಿಗಳ ಗಾಜು ಒಡೆದು ನೀರು ಸೋರುತ್ತದೆ. ಈ ಕುರಿತು ತಾಲೂಕು ಅಧಿಕಾರಗಳಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೇ ಹತ್ತು ಕಿಲೋಮೀಟರ್ ದೂರದಲ್ಲಿರುವ ನೂತನ ವಸತಿ ನಿಲಯಕ್ಕೆ ಏಕಾಏಕಿ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ಈಗ ಸೆಮಿಸ್ಟರ್ ಅಂತಿಮ ಪರೀಕ್ಷೆ ಇರುವುದರಿಂದ ಹೊಸ ವಸತಿ ನಿಲಯಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ. ಹಾಗಾಗಿ, ಸದ್ಯಕ್ಕೆ ಸ್ಥಳಾಂತರ ವಿಷಯ ಕೈಬಿಡಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಹಾಸ್ಟೆಲ್ ಘಟಕದ ಅಧ್ಯಕ್ಷ ಪರಶುರಾಮ ಕೊಪ್ಪಳದ, ನವೀನ ಬಡಪ್ಪನವರ, ವಸಂತ ವಡ್ಡರ, ಕೃಷ್ಣ ನಾಯಕ, ಅಭಿಷೇಕ ತಿಳವಳ್ಳಿ, ರಘು ಕರಿಯಮ್ಮನವರ, ಈರಪ್ಪ ಹರಿಜನ, ಕುಶಾಲ ಲಮಾಣಿ, ಇತರರಿದ್ದರು.
ಸೌಲಭ್ಯದ ಭರವಸೆ ನೀಡಿದ ಡಿಡಿ ವರಗಪ್ಪನವರ
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ತಾಲೂಕು ಅಧಿಕಾರಿ ಆಂಜನೇಯ ಹುಲ್ಲಾಳ ಅವರು ವಸತಿ ನಿಲಯದ ವಾರ್ಡನ್ ಬಸವರಾಜ ದಲ್ಲಣ್ಣನವರ ಜತೆಗೆ ಹಾಸ್ಟೆಲ್‌ನಲ್ಲಿ ಪರಿಶೀಲನೆ ನಡೆಸಿದರು. ಹಾಸ್ಟೆಲ್ ಸ್ಥಳಾಂತರ ಪ್ರಕ್ರಿಯೆ ಸದ್ಯಕ್ಕೆ ಕೈಬಿಡಲಾಗುವುದು. ಕೂಡಲೇ ಪುಸ್ತಕಗಳನ್ನು ಒದಗಿಸಲಾಗುವುದು. ಕಿಟಕಿ, ಬಾಗಿಲುಗಳನ್ನು ಸರಿಪಡಿಸಿ, ಐದು ಕಂಪ್ಯೂಟರ್, ಇತರ ಸೌಲಭ್ಯ ಒದಗಿಸಲಾಗವುದು ಎಂದು ಭರವಸೆ ನೀಡಿದರು.