ಹಾವೇರಿಯಲ್ಲಿ ಗ್ಲಾಸ್ ಹೌಸ್ ನಿರ್ಮಾಣ; ಗಾಂಧಿ ಜಯಂತಿಯಂದು ಶಾಸಕ ರುದ್ರಪ್ಪ ಲಮಾಣಿ ಭರವಸೆ

2 HVR 1 A
Published on

ಹಾವೇರಿ: ಜಿಲ್ಲೆ ಪ್ರವಾಸಿ ತಾಣವಾಗಬೇಕು ಎಂದು ದಿ.ಪಾಟೀಲ ಪುಟ್ಟಪ್ಪನವರು ಯಾವಾಗಲೂ ನನಗೆ ಹೇಳುತ್ತಿದ್ದರು. ಹಾವೇರಿಯಲ್ಲಿ ಉಪ ವಿಜ್ಞಾನ ಕೇಂದ್ರ ಹಾಗೂ ಗಾಂಧಿ ಭವನ ನಿರ್ಮಿಸಲಾಗಿದೆ. ಗ್ಲಾಸ್‌ಹೌಸ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಭರವಸೆ ನೀಡಿದರು. ನಗರದ ರೈಲು ನಿಲ್ದಾಣದ ಬಳಿಯ ನೂತನ ಗಾಂಧಿ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಚರಕದಲ್ಲಿ ನೂಲು ತೆಗೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಮೊದಲು ಹಾವೇರಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಭವನದಲ್ಲಿ ಇಂದು ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಲಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರೀ ಹಾಗೂ ಗಾಂಧೀಜಿ ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದರು. ಇಬ್ಬರು ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರಭಕ್ತಿ ಹೊಂದಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಗಾಂಧೀಜಿ ಅಹಿಂಸೆ ಹಾಗೂ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಮನುಷ್ಯ ನಿರ್ಮಾಣ ಮಾಡಿದ ಯಾವುದೇ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗ ಎಂದು ಹೇಳಲಾಗುತ್ತಿದೆ. ದಲೈಲಾಮಾ, ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕರು ಅಹಿಂಸಾ ಮಾರ್ಗದ ಮೂಲಕ ತಮ್ಮ ಹೋರಾಟದಲ್ಲಿ ಯಶಸ್ಸು ಕಂಡಿದ್ದಾರೆ ಎಂದರು.
ಇಂದು ಭಯೋತ್ಪಾದನೆ ಹಾಗೂ ಯುದ್ಧ ಭೀತಿಯನ್ನು ಎದುರಿಸಲಾಗುತ್ತಿದ್ದು, ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಪ್ರತಿ ಹಳ್ಳಿಗಳು ರಾಮರಾಜ್ಯವಾಗಬೇಕು ಎಂದು ಗಾಂಧೀಜಿವರು ಕನಸು ಕಂಡಿದ್ದರು. ನಮ್ಮ ದೇಶ ಸ್ವಾಲಂಬಿಯಾಗಬೇಕು ಎನ್ನುವ ಆಶಯ ಹೊಂದಿದ್ದರು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡ ಸರಳ ಪ್ರಧಾನ ಮಂತ್ರಿಯಾಗಿದ್ದರು. ಜೈ ಜವಾನ್ ಜೈಕಿಸಾನ್ ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಹಾಗೂ ಯೋಧರನ್ನು ಹುರಿದುಂಬಿಸಿದರು ಎಂದರು.
ಬೆಂಗಳೂರು ಸಾಧನಾ ಅಕಾಡೆಮಿ ಉಪನ್ಯಾಸಕ ಮೆಹಬೂಬ ನಾಯ್ಕೋಡಿ ಮಾತನಾಡಿ, 141 ರಾಷ್ಟ್ರಗಳಲ್ಲಿ ಗಾಂಧೀಜಿವರ ಪುತ್ಥಳಿಗಳಿವೆ. ಅವರ ಬಗ್ಗೆ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಗಾಂಧೀಜಿ ಶತಮಾನ ಕಂಡ ಶ್ರೇಷ್ಠ ನಾಯಕ ಎಂದು ಬಣ್ಣಿಸಿದರು.
ಆರಂಭದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಪವಿತ್ರ ಗ್ರಂಥಗಳನ್ನು ಪಠೀಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಭಯ ಸುಗಮ ಸಂಗೀತ ಕಲಾತಂಡದ ರೇಖಾ ಕುಲಕರ್ಣಿ ಸಂಗಡಿಗರಿಂದ ಗಾಂಧಿ ಪ್ರಿಯ ಗೀತೆಗಳಾದ ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ… ಗೀತ ಗಾಯನ ಜರುಗಿತು. ವಾರ್ತಾ ಇಲಾಖೆ ಹೊರತಂದಿರುವ ಗಾಂಧಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ, ಚನ್ನಮ್ಮ ಬ್ಯಾಡಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಉಪ ವಿಭಾಗಾಧಿಕಾರಿ ಚನ್ನಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಪೌರಾಯುಕ್ತ ಡಾ.ನಾಗರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕಿ ಮಮತಾ ಎಚ್., ತಹಸೀಲ್ದಾರ್ ಶರಣಮ್ಮ, ಗ್ರೇಡ್-2 ತಹಶೀಲ್ದಾರ ಅಮೃತಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net