

ತಮಿಳುನಾಡಿಗೆ ನೀರು, ಕರುನಾಡಿಗೆ ಕಣ್ಣೀರು, ಇದೇ ಕಾಂಗ್ರೆಸ್ ಸಿದ್ಧಾಂತ: ಬೊಮ್ಮಾಯಿ
ಕಾಂಗ್ರೆಸ್ಸಿನಿಂದ ಹೊಸ ಕುಸ್ತಿಪಟು ಕಣದಲ್ಲಿ: ಎಚ್ಕೆಪಿ
ವಿಜಯವಾಣಿ ಸುದ್ದಿಜಾಲ ಗದಗ
ತಮಿಳುನಾಡಿಗೆ ನೀರು, ಕರುನಾಡಿಗೆ ಕಣ್ಣೀರು, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರೆ, ಬಸವಾರಜ ಬೊಮ್ಮಾಯಿ ವಯಸ್ಸಾಗಿರುವ ಕುಸ್ತಿಪಟು ಇದ್ದಂತೆ. ಈ ಬಾರಿ ಯುವ ಕುಸ್ತಿಪಟುವನ್ನು ಕಾಂಗ್ರೆಸ್ ಕಣದಲ್ಲಿ ಬಿಟ್ಟಿದೆ. ಗೆಲವು ನಮ್ಮದೇ ಎಂದು ಸಚಿವ ಎಚ್.ಕೆ. ಪಾಟೀಲ ಬೊಮ್ಮಾಯಿ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗದಗ ಮತಕ್ಷೇತ್ರದಲ್ಲಿ ಬುಧವಾರ ಒಂದೇ ದಿನ ಅಧಿಕೃತವಾಗಿ ಪ್ರಚಾರಕ್ಕೆ ಮುಂದಡಿ ಇಟ್ಟಿದ್ದು, ಬಿರು ಬಿಸಿಲಿನೊಂದಿಗೆ ಪ್ರಚಾರದಲ್ಲಿ ಬೆವರು ಇಳಿಸಿದರು. ಒಂದೇ ದಿನ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪ್ರಚಾರ ಅರಂಭಿಸಿದ್ದು ಕಾಕತಳಿಯ. ಮೊದಲ ಹಂತದ ಪ್ರಚಾರಕ್ಕೀಳಿದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಗರದ ದೇವಸ್ಥಾನಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದರೇ, ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರು ಗದಗ ಗ್ರಾಮೀಣ ಭಾಗದಲ್ಲಿ ಮತಬೇಟೆ ಆರಂಭಿಸಿದರು. ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾಧ್ಯಕ್ಷ ರಾಜು ಕುರಡಗಿ ಜತೆಗೂಡಿ ಹೆಜ್ಜೆಹಾಕಿದರು. ಆನಂದ ಗಡ್ಡದೇವರಮಠ ಅವರಿಗೆ ಸಚಿವ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಬಲ ತುಂಬಿದರು.
ಕರುನಾಡಿಗೆ ಕಣ್ಣೀರು?
ನಗರದಲ್ಲಿ ಬುಧವಾರ ಟೆಂಪಲ್ ರನ್ ಮೂಲಕ ಬಿಜೆಪಿ ಅಭ್ಯರ್ಥಿ ಬಸವಾರಜ ಬೊಮ್ಮಾಯಿ ಮತಯಾಚನೆ ಆರಂಭಿಸಿದರು. ತೋಂಟದಾರ್ಯ ಮಠ, ವೀರೇಶ್ವರ ಪುಣ್ಯಾಶ್ರಮ, ವೀರನಾರಾಯಣ, ತ್ರಿಕುಟೇಶ್ವರ ದೇವಸ್ಥಾನ, ವಕೀಲರ ಸಂಘ, ನಿವೃತ್ತ ನೌಕರರ ಸಂಘ, ಎಪಿಎಂಸಿ ವ್ಯಾಪಾರಸ್ಥರಸಂ, ಅಸಂಟಿತ ಕಾಮಿರ್ಕರ ಸಂಸ್ಥೆ ಹಾಗೂ ಮಾಜಿ ಸೈನಿಕರ ಸಂಘ, ಸಂಸ್ಥೆ ಸದಸ್ಯರ ಜತೆ ಚರ್ಚೆ ನಡೆಸಿದರು. ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಕೆಆರ್ಎಸ್ ಮೂಲಕ ತಮಿಳುನಾಡಿಗೆ ನೀರು ಹರಿಸಿ, ಕರುನಾಡಿನ ಜನತೆಗೆ ಕಾಂಗ್ರೆಸ್ ಕಣ್ಣೀರು ಹಾಕಿಸುತ್ತಿದೆ ಎಂದು ಆರೋಪಿಸಿದರು. ತಮಿಳುನಾಡಿನ ಹಿತ ಕಾಪಾಡಲು ಕಾಂಗ್ರೆಸ್ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ತಮಿಳುನಾಡಿನ ರಾಜಕೀಯ ಪಾರ್ಟನರ್ ಡಿಎಂಕೆ ಪಕ್ಷವನ್ನು ಸಂತೋಷದಿಂದ ಇಡಲು ಎಲ್ಲ ಮಾರ್ಗದಲ್ಲೂ ಪ್ರಯತ್ನಿಸುತ್ತಿದೆ. ತಮಿಳುನಾಡಿಗೆ ನೀರು ಹರಿಸಿರುವುದೇ ಜ್ವಲಂತ ಉದಾಹರಣೆ ಎಂದರು.
ಹಲವಾರು ಬಾರಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಸರ್ವಪಕ್ಷ ಸಭೆ ಸೇರಿದಂತೆ, ವಿಧಾನಸಭೆಯಲ್ಲೂ ಸರ್ಕಾರದ ನಿರ್ಣಯವನ್ನು ವಿರೋಧಿಸಿದ್ದೇವೆ. ಕರ್ನಾಟಕದ ಜನರು ಇಂದು ನೀರಿಗೆ ಪರಿತಪಿಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಬೇಸಿಗೆಯಲ್ಲಿ ಜಲಾನಯನ ಪ್ರದೇಶದ ಜನರಿಗೆ ಕುಡಿಯುವ ನೀರಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವೇ ಮಹತ್ವದ್ದಾಗಿದ್ದು ಖಂಡನೀಯ ಎಂದು ಆರೋಪಿಸಿದರು.
ಕಾಂಗ್ರೆಸ್ ಕುಸ್ತಿಪಟು ಒಬ್ಬ ಯುವಕ:
ಸಂಘ, ಸಂಸ್ಥೆ ಮುಖಂಡರ, ಕಾರ್ಯಕರ್ತರೆ ಜತೆ ಬೊಮ್ಮಾಯಿ ಮತಬೇಟೆಯಲ್ಲಿ ನಿರತರಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಡ್ಡದೇವರಮಠ ಜತೆಗೂಡಿ ಸಚಿವ ಎಚ್.ಕೆ. ಪಾಟೀಲ ಮತಭಿಕ್ಷೆ ಆರಂಭಿಸಿದ್ದರು. ತಾಲೂಕಿನ ನಾಗಾವಿ, ಸೊರಟೂರು, ಹತಿರ್, ಮುಳಗುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಲಾಯಿತು ಮತ್ತು ಪ್ರಮುಖವಾಗಿ ಲಂಬಾಣಿ ಸಮುದಾಯಗಳ ಭೇಟಿ ಮಾಡಿ ಮತಯಾಚನೆ ಮಾಡಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಕೆ. ಪಾಟೀಲ, ಬಸವರಾಜ ಬೊಮ್ಮಾಯಿ ದಾವಣಗೆರೆ ಚಾಲಿರ್ ಇದ್ದಂತೆ ಎಂದು ವ್ಯಂಗ್ಯವಾಡಿದರು. ಕುಸ್ತಿಯಲ್ಲಿ ಬೊಮ್ಮಾಯಿ ಬಸವರಾಜ ಬೊಮ್ಮಾಯಿ ದಾವಣಗೆರೆ ಚಾಲಿರ್ ಇದ್ದಂತೆ. ಆದರೆ, ಇದೀಗ ಮುದುಕರಾಗಿದ್ದಾರೆ. ಹೊಸ ಕುಸ್ತಿಪಟುಗಳನ್ನು ಕಣಕ್ಕೆ ಇಳಿಸಿದಾಗ ಯಾರು ಗೆಲ್ಲುತ್ತಾರೆ ಎಂಬುದು ಸಾಭಿತಾಗುತ್ತದೆ. ದಾವಣಗೆರೆ ಚಾಲಿರ್ ಜೊತೆಗೆ ಹೊಸ, ಜಾಣ ಕುಸ್ತಿಪಟು ಇಂದು ಕಣದಲ್ಲಿ ಇದ್ದಾರೆ. ಹಾಗಾಗಿ, ನಮ್ಮದೇ ಗೆಲವು. ಕೇಂದ್ರ ಸರ್ಕಾರದ ಭರವಸೆಗಳು ಹುಸಿಯಾಗಿವೆ. ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ದೇಶದ 2 ಕೊಟಿ ಯುವಕರಿಗೆ ಉದ್ಯೋಗವು ಸಿಗಲಿಲ್ಲ ಎಂದು ಕಿಡಿಕಾರಿದರು.
ಕೋಟ್:
ರಾಜ್ಯದ ಹಲವು ಸಮುದಾಯಗಳನ್ನು ಕೇವಲ ಓಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ಬಳಸುತ್ತಿದೆ. ಸ್ವಾತಂತ್ರ್ಯ ನಂತರ ಆ ಸಮುದಾಯಗಳ ಅಭಿವೃದ್ಧಿ ಆಗಿದೆಯೇ?. ಸಾಗಳು ಕಣ್ಮುಂದೆಯೇ ಇದ್ದಾಗ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯದೊಂದಿಗೆ ಅಭಿವೃದ್ದಿ ಮಾಡುವ ಪಕ್ಷ ಯಾವುದು ಎಂದು ಜನರಿಗೆ ಅರ್ಥವಾಗುತ್ತಿದೆ. ದೇಶದಲ್ಲಿ 400 ಕ್ಕೂ ಅಧಿಕ ಕ್ಷೇತ್ರ ಗೆಲ್ಲುತ್ತೇವೆ.
- ಸಿ.ಸಿ. ಪಾಟೀಲ. ಶಾಸಕ, ಮಾಜಿ ಸಚಿವ
ಕೋಟ್:
ಯುವಕರಿಗೆ ಕಾಂಗ್ರೆಸ್ ಆಧ್ಯತೆ ನೀಡಿದೆ. ಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಸುದಾರಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಗ್ಗೆ ಒಲುವು ಇದೆ.
- ಆನಂದ ಗಡ್ಡದೇವರಮಠ, ಕಾಂಗ್ರೆಸ್