

ಕೇಶವಮೂರ್ತಿ ವಿ.ಬಿ. ಹಾವೇರಿ
ಮುಂಗಾರು ವಿಳಂಬದಿಂದಾಗಿ ದಿಕ್ಕೇ ತೋಚದಂತಾಗಿದ್ದ ಅನ್ನದಾತನಿಗೆ ಜುಲೈನಲ್ಲಿ ಸುರಿದ ಆರಿದ್ರಾ ಮಳೆ ಕೊಂಚ ಮಂದಹಾಸ ಮೂಡುವಂತೆ ಮಾಡಿದೆ. ಕಳೆದ ಒಂದು ಸುರಿದ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಈವರೆಗೆ ಶೇ.63ರಷ್ಟು ಬಿತ್ತನೆ ಮಾಡಲಾಗಿದೆ.
ಜೂನ್‌ನಲ್ಲೇ ಜಿಲ್ಲೆಗೆ ಆಗಮಿಸಬೇಕಿದ್ದ ಮುಂಗಾರು ವಿಳಂಬವಾದ್ದರಿಂದ ಕೊಳವೆ ಬಾವಿಗಳೂ ಬರಿದಾಗಿದ್ದವು. ಇದರಿಂದ ರೈತ ಸಮುದಾಯ ಚಿಂತೆಗೀಡಾಗಿತ್ತು. ಹೀಗೆ ಮುಂದುವರಿದರೆ ಹಿಂದಿನ ಸಾಲ ತೀರಿಸುವುದು ಹೇಗೆ, ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಈ ನಡುವೆ ವರುಣದೇವ ಜುಲೈನಲ್ಲಿ ಕೃಪೆ ತೋರಿದ ಪರಿಣಾಮ ಮೈಕೊಡವಿ ನಿಂತ ಅನ್ನದಾತ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾನೆ.
ಜಿಲ್ಲೆಯಲ್ಲಿ ಒಟ್ಟು 3,30,447 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಸದ್ಯಕ್ಕೆ ಈವರೆಗೆ 2,08,499 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಅಂದರೆ ಈವರೆಗೆ ಶೇ.63ರಷ್ಟು ಬಿತ್ತನೆಯಾಗಿದೆ. ಒಂದೆರೆಡು ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, ಉಳಿದ ರೈತರು ಬಿತ್ತನೆಗೆ ಮುಂದಾಗಿದ್ದಾರೆ.
ಕಳೆದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಬಿತ್ತನೆ ಕುಂಠಿತವಾಗಿದೆಯಾದರೂ, ಆರಿದ್ರಾ ಮಳೆ ಹೊಸದೊಂದು ಭರವಸೆ ಮೂಡಿಸಿದೆ. ಭೂಮಿ ಹದವಾಗುತ್ತಿದ್ದಂತೆ ರೈತರು ತಮ್ಮ ಹೊಲಗಳಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಹತ್ತಿ, ಜೋಳ, ಕಬ್ಬು, ಹೆಸರುಕಾಳು, ಇತರ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಇನ್ನೂ ಕೆಲವರು ಪರ್ಯಾಯ ಬೆಳೆಗೆ ಚಿಂತನೆ ನಡೆಸಿದ್ದಾರೆ.
ಹಾವೇರಿ, ಗುತ್ತಲ ಸೇರಿದಂತೆ ಇತರ ಭಾಗದಲ್ಲಿ ಜುಲೈ ಮೊದಲ ವಾರವೇ ಉತ್ತಮ ಮಳೆಯಾದ್ದರಿಂದ ಈಗಾಗಲೇ ಬಿತ್ತಿದ ಬೀಜ ಮೊಳಕೆಯೊಡೆದು ಸಸಿ ಬೆಳವಣಿಗೆ ಹಂತಕ್ಕೆ ತಲುಪಿವೆ. ರಾಣೆಬೆನ್ನೂರ, ಹಲಗೇರಿ, ತುಮ್ಮಿನಕಟ್ಟಿ, ರಟ್ಟಿಹಳ್ಳಿ, ಹಿರೇಕೆರೂರ, ಬ್ಯಾಡಗಿ ಹಾಗೂ ಇತರೆಡೆಗಳಲ್ಲಿ ಮಳೆ ಸ್ವಲ್ಪ ತಡವಾದ್ದರಿಂದ ಬಿತ್ತನೆ ತಡವಾಗಿ ಮಾಡಲಾಗುತ್ತಿದೆ.
ವಾಡಿಕೆಗಿಂತ ಹೆಚ್ಚು ಮಳೆ
ಈ ಬಾರಿ ಜೂನ್‌ಗಿಂತ ಹೆಚ್ಚಾಗಿ ಜುಲೈನಲ್ಲಿ ಮಳೆ ಸುರಿದಿದೆ. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಜುಲೈನಲ್ಲಿ 33 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಅಂದರೆ 43 ಮಿ.ಮೀ. ಮಳೆ ಸುರಿದಿದೆ.
ಬಿತ್ತನೆ ಬೀಜ, ಗೊಬ್ಬರಕ್ಕೆ ಬೇಡಿಕೆ
ಮಳೆ ಸುರಿಯುತ್ತಿದ್ದಂತೆ ರೈತ ಸಂಪರ್ಕ ಕೇಂದ್ರ ಹಾಗೂ ಬೀಜ, ಗೊಬ್ಬರ ಅಂಗಡಿಗಳ ಮುಂದೆ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರದಿಂದ ವಿತರಿಸುತ್ತಿರುವ ಬೀಜಗಳ ಜತೆಗೆ ಇತರ ಬೀಜ, ಗೊಬ್ಬರ ಖರೀದಿಗೆ ರೈತರು ಮುಂದಾಗಿದ್ದಾರೆ. ಕಳಪೆ ಬೀಜ ಕುರಿತು ರೈತರು ಮುನ್ನೆಚ್ಚರಿಕೆ ವಹಿಸಬೇಕಿದೆ.
ಮೆಕ್ಕೆಜೋಳಕ್ಕೆ ಸಿಂಹಾಪಾಲು
ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮೆಕ್ಕೆಜೋಳ ಬಿತ್ತನೆ ಹೆಚ್ಚಾಗುತ್ತಿದೆ. ಈ ತಿಂಗಳ ಕೊನೆಯವರೆಗೂ ಮೆಕ್ಕೆಜೋಳ, ಶೇಂಗಾ, ಹತ್ತಿ ಬಿತ್ತಬಹುದು. ಮಳೆ ತಡವಾದ್ದರಿಂದ ಇನ್ನುಮುಂದೆ ಸೊಯಾಬಿನ್ ಬಿತ್ತದಿದ್ದರೆ ಉತ್ತಮ. ಬಿತ್ತಿದರೂ ಆಯ್ದ ಬೀಜವನ್ನೇ ಬಿತ್ತಬೇಕಿದೆ. ಆದರೂ ಕೆಲ ರೈತರು ತಮ್ಮ ವೈಯಕ್ತಿಕ ಆಸಕ್ತಿಯಿಂದ ಬಿತ್ತನೆ ಮಾಡುತ್ತಿದ್ದಾರೆ. ತಡವಾಗಿ ಬಿತ್ತಿದಷ್ಟೂ ರೋಗ ಬರುವ ಹಾಗೂ ಇಳುವರಿ ಕಡಿಮೆ ಆಗುವ ಆತಂಕವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ‘ವಿಜಯವಾಣಿ’ ಮೂಲಕ ರೈತರಿಗೆ ಸಲಹೆ ನೀಡಿದ್ದಾರೆ.
ಜುಲೈನಲ್ಲಿ ಚೆನ್ನಾಗಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ರೈತರಿಗೆ ಅಗತ್ಯವಾದ ಬೀಜ, ಗೊಬ್ಬರ ದಾಸ್ತಾನು ಜಿಲ್ಲೆಯಲ್ಲಿ ಇದೆ. ಬಿತ್ತನೆ, ಬೀಜ, ಗೊಬ್ಬರ ಇತರ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.
- ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ