

ಕೇಶವಮೂರ್ತಿ ವಿ.ಬಿ. ಹಾವೇರಿ
‘ಕೇಂದ್ರ ಸರ್ಕಾರ ಬರ ಪರಿಹಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಚುನಾವಣೆ ಸಂದರ್ಭದಲ್ಲಿ ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿದ್ದ ರಾಜ್ಯ ಸರ್ಕಾರ, ಇದೀಗ ಕೇಂದ್ರ ಸರ್ಕಾರ ಕೊಟ್ಟ ಪರಿಹಾರವನ್ನಷ್ಟೇ ರೈತರಿಗೆ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಿದೆ. ಅಷ್ಟು ಸಾಲದು ಎಂಬಂತೆ ಕೇಂದ್ರದ ಪರಿಹಾರದಲ್ಲೇ ತಾನು ಈ ಮೊದಲು ಕೊಟ್ಟಿದ್ದ 2 ಸಾವಿರ ರೂ.ಗೂ ಕತ್ತರಿ ಪ್ರಯೋಗ ಮಾಡುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋದ ಬಳಿಕ ಕೇಂದ್ರ ಸರ್ಕಾರ ಕೊನೆಗೂ ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿತ್ತು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರವನ್ನು ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಒಂದು ಹೆಕ್ಟೆರ್‌ಗೆ 8,500 ರೂ.ನಂತೆ ಜಮೆ ಮಾಡುತ್ತಿದೆ. ಒಬ್ಬರಿಗೆ ಗರಿಷ್ಠ ಎರಡು ಹೆಕ್ಟೆರ್‌ಗೆ 17,000 ರೂ. ಕೊಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೂ ಕತ್ತರಿ ಹಾಕಿ ಮೊದಲು ತಾನು ಕೊಟ್ಟಿದ್ದ 2,000 ರೂ. ಬರ ಪರಿಹಾರವನ್ನು ಕಡಿತಗೊಳಿಸಿ ರೈತರ ಖಾತೆಗೆ ಕೇವಲ 15,000 ರೂ. ಜಮೆ ಮಾಡುತ್ತಿದೆ. ಕೆಲವರಿಗೆ 12,000 ರೂ. ಹಾಕಿದೆ. ಇದರಿಂದ ಅನ್ನದಾತ ಕೆಂಡಾಮಂಡಲವಾಗಿದ್ದಾರೆ. ರಾಜ್ಯ ಸರ್ಕಾರ ಯಾವ ಮಾನದಂಡ ಇಟ್ಟುಕೊಂಡು ಹಣ ಜಮೆ ಮಾಡುತ್ತಿದೆ. ತನ್ನ ಪಾಲು ಎಷ್ಟು ಎಂಬುದನ್ನು ಸ್ಪಷ್ಟಪಡಿಸಬೇಕು. ಸೂಕ್ತ ಪರಿಹಾರ ಘೋಷಿಸಬೇಕು. ಈ ಮೂಲಕ ಭೀಕರ ಬರಗಾಲದಿಂದ ಬೆಂದಿರುವ ಅನ್ನದಾತನ ಕಣ್ಣೀರು ಒರೆಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಸಿಎಂಗೆ ಅರ್ಜಿ ಅಭಿಯಾನ
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬರ ಪರಿಹಾರಕ್ಕಾಗಿ ರೈತರು ಯಾರೂ ಅರ್ಜಿ ಕೊಟ್ಟಿಲ್ಲ. ನಾನೇ ಕೇಂದ್ರದ ಜತೆ ಮಾತನಾಡಿ ಕೊಡಿಸುತ್ತಿದ್ದೇನೆ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯನವರಿಗೆ ಅರ್ಜಿ ಕೊಡುವ ಅಭಿಯಾನ ಶುರು ಮಾಡಿದ್ದೇವೆ. ಮೇ 14ರಂದು ಬ್ಯಾಡಗಿಯಲ್ಲಿ 2,500 ರೈತರು ಅರ್ಜಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ 8,500 ರೂ.ಕ್ಕೆ ರಾಜ್ಯ ಸರ್ಕಾರ 8,500 ರೂ. ಸೇರಿಸಿ ಕೊಡಬೇಕು. 2 ಸಾವಿರ ರೂ. ಕಡಿತ ಮಾಡಬಾರದೆಂದು ತಮ್ಮ ಜಮೀನಿನ ವಿವರ, ಬರದಿಂದ ಹಾನಿಗೀಡಾದ ದಾಖಲೆ ಸೇರಿಸಿ ಬರ ಪರಿಹಾರಕ್ಕಾಗಿ ರೈತರು ವೈಯಕ್ತಿಕವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನುತ್ತಾರೆ ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.
ಕಳೆದ ಬಾರಿ 27,200 ರೂ.,
ಈ ಬಾರಿ 17,000 ರೂ.
2022ರಲ್ಲಿ ಕಳೆದ ಬಾರಿ ಅತಿವೃಷ್ಠಿ ಆದಾಗ ಕೇಂದ್ರ ಸರ್ಕಾರ ಹೆಕ್ಟೆರ್‌ಗೆ 6,800 ರೂ. ಕೊಟ್ಟಿತ್ತು. ರಾಜ್ಯ ಸರ್ಕಾರ ಅದಕ್ಕೆ 6,800 ರೂ. ಸೇರಿಸಿ 13,600 ರೂ. ಕೊಟ್ಟಿತ್ತು. ಎರಡು ಹೆಕ್ಟೆರ್‌ಗೆ 27,200 ರೂ. ಕೊಟ್ಟಿತ್ತು. ಈ ಬಾರಿ ಕೇಂದ್ರದಿಂದ ಬಂದ 8,500 ರೂ.(ಎರಡು ಹೆಕ್ಟೆರ್‌ಗೆ 17,000 ರೂ.) ಮಾತ್ರ ಕೊಡುತ್ತಿದೆ. ರಾಜ್ಯ ಸರ್ಕಾರ ಬಿಡಿಗಾಸು ಕೊಡುತ್ತಿಲ್ಲ, ಅದರಲ್ಲೂ 2 ಸಾವಿರಕ್ಕೆ ಕತ್ತರಿ ಹಾಕುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಶುರುವಾಗಿದೆ ಎನ್ನುತ್ತದೆ ರೈತ ಸಂಘ.
ಹಲವರಿಗೆ 2 ಸಾವಿರ ರೂ. ಬಾಕಿ
ರಾಜ್ಯ ಸರ್ಕಾರ ಕೊಟ್ಟಿದ್ದ 2 ಸಾವಿರ ರೂ. ಬರ ಪರಿಹಾರವೂ ಈವರೆಗೆ ಕೆಲವರಿಗೆ ಸಿಕ್ಕಿಲ್ಲ. ಜಿಲ್ಲೆಯ 1.98 ಲಕ್ಷ ಫಲಾನುಭವಿಗಳ ಪೈಕಿ 10 ಸಾವಿರ ರೈತರಿಗೆ ಸಿಕ್ಕಿರಲಿಲ್ಲ. ಜಿಲ್ಲಾಡಳಿತ ಅಂತಹ ರೈತರನ್ನು ಹುಡುಕಿ ಸಮಸ್ಯೆ ಪತ್ತೆ ಹಚ್ಚಿ ಹಣ ಜಮೆ ಮಾಡಿದೆ. ಇನ್ನೂ ಕೆಲವರು ತಮ್ಮ ತಾಂತ್ರಿಕ ದೋಷ ಸರಿಪಡಿಸಿಕೊಂಡಿಲ್ಲ. ಅಂಥವರು ಎಲ್ಲ ತಾಲೂಕು ಆಡಳಿತ ಕಚೇರಿಗಳಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರ ಸಂಪರ್ಕಿಸಿ ಸಮಸ್ಯೆ ಬಗೆಹರಿಸಕೊಳ್ಳಬಹುದು ಎನ್ನುತ್ತಾರೆ ಡಿಸಿ ರಘುನಂದನ ಮೂರ್ತಿ.
ಸಾಲಕ್ಕೆ ಜಮೆ ಮಾಡುವಂತಿಲ್ಲ
ಬರ ಪರಿಹಾರವನ್ನು ಸಾಲಕ್ಕೆ ಜಮೆ ಮಾಡಿದರೆ ಅದನ್ನು ಆಮೇಲೆ ನೋಡುತ್ತೇವೆ. ಸರ್ಕಾರದ ಆದೇಶವೇ ಇದೆ. ಬರ ಪರಿಹಾರದ ಹಣವನ್ನು ಸಾಲಕ್ಕೆ ಪಾವತಿ ಮಾಡಬಾರದೆಂದು. ಹಾಗೆ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕೇಸ್ ಹಾಕಿದರೆ ಅವರು ಕೆಲಸ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ.
ಕೋಟ್:
ಕೇಂದ್ರ ಸರ್ಕಾರ ಹೆಕ್ಟೆರ್‌ಗೆ 8,500 ರೂ. ಬರ ಪರಿಹಾರ ಕೊಟ್ಟಿದೆ. ರಾಜ್ಯ ಸರ್ಕಾರವೂ 8,500 ರೂ. ಸೇರಿಸಿ ಒಂದು ಹೆಕ್ಟೆರ್‌ಗೆ 17,000 ರೂ. ಹಾಗೂ ಎರಡು ಹೆಕ್ಟೆರ್‌ಗೆ 34,000 ರೂ. ಪರಿಹಾರ ಕೊಡಬೇಕು. 2,000 ರೂ. ಕಟ್ ಮಾಡಬಾರದು. ಈ ಪರಿಹಾರದಿಂದ ಬೀಜ, ಗೊಬ್ಬರದ ಖರ್ಚಿಗಾದರೂ ಸರಿಹೋಗುತ್ತದೆ. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.
- ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಾವೇರಿ
ಕೋಟ್:
ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ರೈತರ ಖಾತೆಗಳಿಗೆ ಬರ ಪರಿಹಾರದ ಮೊತ್ತ ಹೆಕ್ಟೆರ್‌ಗೆ 8,500 ರೂ.ನಂತೆ ಜಮೆ ಮಾಡಲಾಗುತ್ತಿದೆ. ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಎಷ್ಟು ರೈತರಿಗೆ ಜಮೆಯಾಗಿದೆ ಎಂಬುದು ತಿಳಿಯಲಿದೆ.
- ರಘುನಂದನ ಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ