

ಹಾವೇರಿ: ನಗರದ ಸುಭಾಷ ವೃತ್ತದ ಬಳಿ ಇರುವ ದಾನಮ್ಮದೇವಿ ದೇವಸ್ಥಾನದ ಎದುರಿನ ಖಬರ್‌ಸ್ತಾನ (ಸ್ಮಶಾನ) ಜಾಗದಲ್ಲಿ ಅಂಜುಮನ್ ಸಂಸ್ಥೆ ವತಿಯಿಂದ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಈ ಕಾನೂನುಬಾಹಿರ ಕಾಮಗಾರಿಯನ್ನು ಕೂಡಲೇ ಬಂದ್ ಮಾಡಿಸಬೇಕು. ಇಲ್ಲದಿದ್ದರೆ, ಗಂಭೀರ ಸ್ವರೂಪದ ಹೋರಾಟ ಅನಿವಾರ್ಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ವಿವಿಧ ಸಂಸ್ಥೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಕಾನೂನು ಪ್ರಕಾರ ಅವಕಾಶವಿಲ್ಲ. ಇದನ್ನು ಹಲವು ಪ್ರಕರಣಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಪುನರುಚ್ಛರಿಸಿದೆ. ಅಂಜುಮನ್ ಸಂಸ್ಥೆಯವರು ಬೇರೆ ಎಲ್ಲೋ ವಾಣಿಜ್ಯ ಮಳಿಗೆ ನಿರ್ಮಿಸುವುದಾಗಿ 2016ರಲ್ಲಿ ನಗರಸಭೆಯಿಂದ ಪರವಾನಿಗೆ ಪಡೆದು, ಈಗ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಇಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ತಡೆಯಾಜ್ಞೆ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಟ್ಟಡ ನಿರ್ಮಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ವಕೀಲ ಕೆ.ಸಿ.ಪಾವಲಿ ಮಾತನಾಡಿ, ಕಬರಸ್ಥಾನಕ್ಕೆ 1930ರಲ್ಲಿ ಎರಡು ಎಕರೆ ಜಾಗೆ ಮಂಜೂರಾಗಿದೆ. ಇದರ ಎದುರುಗಡೆ ದಾನಮ್ಮದೇವಿ ದೇವಸ್ಥಾನ, ಬಸವ ಭವನ ಇದೆ. ಹೀಗಿದ್ದರೂ ಎರಡೂ ಸಮುದಾಯದವರು ಈವರೆಗೂ ಅವರವರ ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ಆಚರಿಸಿಕೊಂಡು ಬಂದಿದ್ದಾರೆ. ಈಗ ಇಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ಸರಿಯಲ್ಲ ಎಂದರು.
ನಗರಸಭೆ ಮಾಜಿ ಸದಸ್ಯ ನಿರಂಜನ ಹೇರೂರ ಮಾತನಾಡಿ, ದಾನಮ್ಮದೇವಿ ದೇವಸ್ಥಾನದ ಎದುರು ವಾಣಿಜ್ಯ ಕಟ್ಟಡ ಕಟ್ಟಡದಂತೆ ನಾವು ಸೌಹಾರ್ದಯುತವಾಗಿ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ಕಟ್ಟಡ ಕಾಮಗಾರಿ ಮುಂದುವರೆದರೆ ಸ್ವಯಂ ಪ್ರೇರಿತವಾಗಿ ಹಾವೇರಿ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಯ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಪ್ರದೀಪ ಮುಳ್ಳೂರು ಮಾತನಾಡಿ, ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ನೋಟಿಸ್ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ. ಈ ಕುರಿತು ಕಾನೂನು ಹೋರಾಟ ಆರಂಭಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಜಯಕುಮಾರ ಚಿನ್ನಿಕಟ್ಟಿ, ಮೋಹನ್‌ಸಿಂಗ್ ರಜಪೂತ, ಬಸವರಾಜ ಹಾಲಪ್ಪನವರ, ಕಿರಣ ಕೊಳ್ಳಿ, ಅಶೋಕ ಮರೆಣ್ಣನವರ, ವೆಂಕಟೇಶ ನಾರಾಯಣಿ, ದ್ಯಾಮಣ್ಣ ಕೊಟ್ಟೂರು, ಮಹಾಲಿಂಗಯ್ಯ ಹಿರೇಮಠ, ಇತರರಿದ್ದರು.