

ಹಾವೇರಿ: ಮುಂಗಾರು ಮಳೆ ವಿಳಂಭವಾಗಿದ್ದರೂ ಕೂಡ ಜುಲೈ ಆರಂಭದಿಂದ ಭರ್ಜರಿ ಆರ್ಭಟ ನಡೆಸುವ ಮೂಲಕ ಜಿಲ್ಲೆಯ 1,130 ಮನೆಗಳಿಗೆ ಹಾನಿ ಮಾಡಿದೆ. ಅತಿವೃಷ್ಟಿಗೆ ಮೂವರು ಬಲಿಯಾಗಿದ್ದು, 16 ಜಾನುವಾರುಗಳು ಅಸುನೀಗಿವೆ. ಶಾಲೆ, ಅಂಗನವಾಡಿ ಕೊಠಡಿ, ರಸ್ತೆಗಳು ಹಾನಿಗೀಡಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 39.35 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ.
ಜು.22ರಿಂದ 28ರವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 33.4 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, ವಾಡಿಕೆಗಿಂತ ಹೆಚ್ಚಾಗಿ 102.9 ಮಿ.ಮೀ. ಮಳೆ ಸುರಿಯುವ ಮೂಲಕ ಶೇ.208ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಬ್ಯಾಡಗಿ ತಾಲೂಕಿನಲ್ಲಿ 125.7 ಮಿ.ಮೀ. ಮಳೆಯಾಗಿದೆ. ಹಾನಗಲ್ಲನಲ್ಲಿ 149.2 ಮಿ.ಮೀ. ಮಳೆಯಾಗಿದೆ. ಹಾವೇರಿಯಲ್ಲಿ 84.1 ಮಿ.ಮೀ., ಹಿರೇಕೆರೂರಲ್ಲಿ 119.6 ಮಿ.ಮೀ., ರಾಣೆಬೆನ್ನೂರಲ್ಲಿ 81.5 ಮಿ.ಮೀ., ಸವಣೂರಲ್ಲಿ 81.9 ಮಿ.ಮೀ., ಶಿಗ್ಗಾಂವಿಯಲ್ಲಿ 106.1 ಮಿ.ಮೀ., ರಟ್ಟಿಹಳ್ಳಿಯಲ್ಲಿ 83.3 ಮಿ.ಮೀ. ಮಳೆಯಾದ ವರದಿಯಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ 82.98 ಹೆಕ್ಟೆರ್ ಬೆಳೆ ಹಾನಿಯಾಗಿದೆ. ಮುಂಗಾರು ಮಳೆಗೆ 95.00 ಹೆಕ್ಟೆರ್ ಕೃಷಿ ಬೆಳೆ, 42.55 ಹೆಕ್ಟೆರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಒಟ್ಟು 120.53 ಹೆಕ್ಟೆರ್ ಬೆಳೆ ಹಾನಿಗೀಡಾಗಿದೆ. ಸವಣೂರ ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಇದರಲ್ಲಿ 22 ಕುಟುಂಬಗಳ 136 ಜನ ವಾಸವಾಗಿದ್ದಾರೆ.
34.91 ಕಿ.ಮೀ. ರಾಜ್ಯ ಹೆದ್ದಾರಿ, 103.58 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 35 ಸೇತುವೆಗಳು, 309 ಕಿ.ಮೀ. ಗ್ರಾಮೀಣ ರಸ್ತೆಗಳು, 4 ಸರ್ಕಾರಿ ಕಟ್ಟಡಗಳು, 14 ಟ್ರಾನ್ಸ್ ಫಾರ್ಮ್‌ಗಳು, 378 ಕಂಬಗಳು, 1,273 ಶಾಲಾ ಕೊಠಡಿಗಳು, 236 ಅಂಗನವಾಡಿ ಕಟ್ಟಡಗಳು, ಸೇರಿದಂತೆ ಇತರ ಸಾರ್ವಜನಿಕ ಆಸ್ತಿ ಹಾನಿಗೀಡಾದ ವರದಿಯಾಗಿದೆ. ಒಟ್ಟಾರೆಯಾಗಿ 39.35 ಕೋಟಿ ರೂ. ಅಂದಾಜು ವೆಚ್ಚ ಆಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 34.46 ಕೋಟಿ ರೂ. ಪರಿಹಾರ ನೀಡಲು ವರದಿ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಇನ್ನೂ ಮೂರ್ನಾಲ್ಕು ದಿನ ಮಳೆ
ಇನ್ನೂ ಮೂರ್ನಾಲ್ಕು ದಿನಗಳವರೆಗೆ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.