

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಸವಣೂರ ತಾಲೂಕಿನ ಬರದೂರ ಗ್ರಾಮದ ರಾಮಲಿಂಗೇಶ್ವರ ಮಠದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲು ತಂಗಿದ್ದ 30ಕ್ಕೂ ಅಧಿಕ ಭಕ್ತರು ಸಿಲುಕಿಕೊಂಡು ಪರದಾಡಿದರು.
ಹಾವೇರಿ ತಾಲೂಕು ತೋಟದಯಲ್ಲಾಪುರ ನಿವಾಸಿಗಳು ಪಂಡರಾಪುರಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು. ರಾತ್ರಿ ಬರದೂರ ಗ್ರಾಮದ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಚಳ್ಳಾಳ- ಬರದೂರ ಎರಿ ಹಳ್ಳ ತುಂಬಿ ಮಠ ನಡುಗಡ್ಡೆಯಂತಾಗಿದೆ.
ಮಠದಲ್ಲಿ ತಂಗಿದ್ದ ಭಕ್ತರು ಹೊರಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ವಿಷಯ ತಿಳಿದ ಕೂಡಲೇ ಜಿಲ್ಲಾಡಳಿತ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೋಟ್ ಮೂಲಕ ಭಕ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.
ಜಿಲ್ಲೆಯ ನೂಕಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಸ್ಥಳಕ್ಕೆ ಪಶು ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಣೆಬೆನ್ನೂರಿನ ದೊಡ್ಡ ಕೆರೆ ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಹಳ್ಳದ ಮೂಲಕ ಹರಿಯುತ್ತಿದದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
ಅಪಾರ ಪ್ರಮಾಣದ ಬೆಳೆ ಹಾನಿ
ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಸಾವಿರಾರು ಹೆಕ್ಟೆರ್ ಬೆಳೆ ಹಾನಿಗೀಡಾಗಿದೆ. ಹಲವೆಡೆ ಕೆರೆ, ಹಳ್ಳಗಳು ಉಕ್ಕಿ ಹೊಲಗಳಿಗೆ ನುಗ್ಗಿವೆ. ಹಾನಗಲ್ಲ ತಾಲೂಕೂ ಹೆರೂರ ಗ್ರಾಮದಲ್ಲಿ ನಾಲಾ ತಡೆಗೋಡೆ ಒಡೆದು ನೂರಾರು ಎಕರೆ ಜಮೀನಿಗೆ ನುಗ್ಗಿದೆ. ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಸೊಯಾಬಿನ್, ಶೇಂಗಾ, ಭತ್ತ, ಹೆಸರು, ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಮುಳುಗಿವೆ. ರೈತರ ಸಂಕಷ್ಟ ಹೇಳತೀರದಾಗಿದೆ. ತುರ್ತು ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ
ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿನ ಶಾಲೆಗಳಿಗೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಘೋಷಿಸಲಾಗಿತ್ತು.
ಡಿಡಿಪಿಐ ಸೂಚನೆಯ ಮೇರೆಗೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಅ.21ರಂದು ರಜೆ ಘೋಷಿಸಲಾಗಿದೆ. ಈ ರಜೆ ಹೊಂದಾಣಿಕೆಗಾಗಿ ಮುಂದಿನ ಎರಡು ಶನಿವಾರ ಅರ್ಧ ದಿನದ ಬದಲು ಪೂರ್ಣ ದಿನ ಶಾಲೆ ನಡೆಸುವಂತೆ ಬಿಇಒ ಮೌನೇಶ ಬಡಿಗೇರ ಆದೇಶಿಸಿದ್ದಾರೆ. ರಜೆ ಘೋಷಣೆ ತಡವಾಗಿದ್ದರಿಂದ ಹಾಗೂ ಬೆಳಗ್ಗೆಯಿಂದ ಬಿಸಿಲು ಕಾಣಿಸಿಕೊಂಡ ಪರಿಣಾಮ ಕೆಲ ಶಾಲೆಗಳು ಎಂದಿನಂತೆ ನಡೆದವು.
ನದಿಯಂತಾದ ನದಿನೀರಲಗಿ
ಭಾರಿ ಮಳೆಗೆ ಹಾವೇರಿ ತಾಲೂಕಿನ ನದಿನೀರಲಗಿ ಗ್ರಾಮದ ತುಂಬ ನೀರು ತುಂಬಿಕೊಂಡಿದ್ದು ಸೋಮವಾರ ಗ್ರಾಮ ಅಕ್ಷರಶಃ ನದಿಯಂತಾಗಿತ್ತು. ಶಾಲಾ ಆವರಣ, ಗ್ರಾಮದ ವಿವಿಧ ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ರಾತ್ರಿ ಪೂರ್ತಿ ನಿದ್ದೆ ಇಲ್ಲದೇ ಮಳೆರಾಯನ ಜಪ ಮಾಡಿದರು. ಗ್ರಾಮಕ್ಕೆ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಯಾರೂ ಭೇಟಿ ನೀಡಿಲ್ಲ. ಸಮಸ್ಯೆ ಆಲಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.