ಕಾಟೇನಹಳ್ಳಿಯಲ್ಲಿ ಮಡುಗಟ್ಟಿದ ಶೋಕ; ಒಂದೇ ದಿನ ನಾಲ್ಕು ಸಾವು ಕಂಡು ದುಖಿಃತರಾದ ಹಳ್ಳಿಗರು; ಕುಟುಂಬಸ್ಥರ ಆಕ್ರಂದನ

30 HVR 5 C
Published on

ಹಾವೇರಿ: ಆಲದಕಟ್ಟಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ನಾಲ್ವರಲ್ಲಿ ಮೂವರು ಯುವಕರೂ ತಾಲೂಕಿನ ಕಾಟೇನಹಳ್ಳಿ ಗ್ರಾಮದವರು. ಇದೇ ಸಂದರ್ಭದಲ್ಲಿ ಗ್ರಾಮದ ವೃದ್ದೆಯೊಬ್ಬರೂ ಅಸುನೀಗಿದ್ದರು. ಹಾಗಾಗಿ, ಗ್ರಾಮದಲ್ಲಿ ಶೋಕ ಮಡುಗಟ್ಟಿತ್ತು. ಮೃತ ಮೂವರು ಕಾರ್ಮಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟ ದ್ಯಾಮಪ್ಪ ಶಿವಪ್ಪ ಓಲೇಕಾರ (22), ರಮೇಶ ಕರಿಯಪ್ಪ ಬಾರ್ಕಿ (22) ಹಾಗೂ ಶಿವಲಿಂಗಪ್ಪ ಶಿವಬಸಪ್ಪ ಅಕ್ಕಿ (24) ಮೂವರೂ ಕಾಟೇನಹಳ್ಳಿಯವರು. ಕೆ.ಬಿ. ಜಯಣ್ಣ ಮಾತ್ರ ದಾವಣಗೆರೆ ಮೂಲದವರು.
ದ್ಯಾಮಪ್ಪ, ರಮೇಶ ಹಾಗೂ ಶಿವಲಿಂಗಪ್ಪ ಅವರ ಮೃತದೇಹವನ್ನು ಹಾವೇರಿ ಜಿಲ್ಲಾಸ್ಪತ್ರೆಯಿಂದ ಬುಧವಾರ ಮಧ್ಯಾಹ್ನ ಕಾಟೇನಹಳ್ಳಿಗೆ ತರುತ್ತಿದ್ದಂತೆ ಕುಟುಂಬಸ್ಥರು, ಗ್ರಾಮಸ್ಥರ ಆಕ್ರಂದನ ಹೆಚ್ಚಾಯಿತು. ಕಣ್ಣೀರ ಕೋಡಿ ಹರಿಯಿತು. ವಯಸ್ಸಿಗೆ ಬಂದಿದ್ದ ಯುವಕರು ಸುಟ್ಟು ಕರಕಲಾಗಿದ್ದನ್ನು ಕಂಡ ಪಾಲಕರಿಗೆ ಜಗತ್ತೇ ಕತ್ತಲಾದಂತೆ ಭಾಸವಾಯಿತು. ಗ್ರಾಮಸ್ಥರೆಲ್ಲ ಮೊದಲೇ ಯೋಜಿಸಿದ್ದಂತೆ ಐದೇ ನಿಮಿಷದಲ್ಲಿ ಪೂಜಾ, ವಿಧಿ-ವಿಧಾನ ಪೂರ್ಣಗೊಳಿಸಿ, ಸ್ಮಶಾನಕ್ಕೆ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಪೂರ್ಣಗೊಳಿಸಿದರು. ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದರು.
ಮೂವರೂ ಸ್ನೇಹಿತರು
ದ್ಯಾಮಪ್ಪ, ರಮೇಶ ಹಾಗೂ ಶಿವಲಿಂಗಪ್ಪ ಮೂವರೂ ಸ್ನೇಹಿತರಾಗಿದ್ದು ಹಲವು ವರ್ಷಗಳಿಂದ ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟಿಗೆ ಓಡಾಡುತ್ತಿದ್ದರು. ಮೂವರ ಕುಟುಂಬದವರೂ ಜಮೀನು ಹೊಂದಿದ್ದರೂ ಬರ, ಅತಿವೃಷ್ಠಿಯಿಂದ ಬೇಸತ್ತು ಕುಟುಂಬ ನಿರ್ವಹಣೆಗಾಗಿ ಕೆಲಸಕ್ಕೆ ಹೋಗುತ್ತಿದ್ದರು. ಮೂವರೂ ತಮ್ಮ ಕುಟುಂಬಗಳನ್ನು ತಾವೇ ನಿರ್ವಹಣೆ ಮಾಡುತ್ತ ಇತರರಿಗೆ ಮಾದರಿಯಾಗಿದ್ದರು. ಮೂವರಿಗೂ ಶೀಘ್ರದಲ್ಲೇ ಮದುವೆ ಮಾಡಬೇಕು ಎಂದು ಕುಟುಂಬದವರು ಚಿಂತಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ದುರ್ಘಟನೆ ನಡೆದು ಹೋಯಿತು ಎಂದು ಕುಟುಂಬಸ್ಥರು ಕಣ್ಣೀರಿಟ್ಟರು. ಕೋಟ್:
ಯಪ್ಪಾ ನೀ ದುಡಿಯಾಕ ಎಲ್ಲಿಗೂ ಹೋಗಬೇಡ. ಎರಡು ದನ ಅದಾವು. ನಾನು ದುಡಿದ ತರತೇನಿ ಎನ್ನುತ್ತಿದ್ದ. ನನ್ನ ಮಗಾ ಮದ್ವಿ ಆಗೋದ್ ಬಿಟ್ಟು ಮಶಾನಕ್ಕ ಹೋದನಲ್ಲೋ ಯಪ್ಪಾ. ನಮ್ ಮನಿಗೆ ಈಗ ಯಾರ್ ದಿಕ್ಕು ? ನಮ್ ಮನಿ ನೋಡ್ಕೋತಿದ್ದ ನನ್ ಮಗ ಹೋದನಲ್ಲೋ.
ಶಿವಪ್ಪ ಓಲೇಕಾರ, ಮೃತ ದ್ಯಾಮಪ್ಪ ಓಲೇಕಾರ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net