ಬಲವಂತದ ಸಾಲ ವಸೂಲಿ ತಡೆಗಟ್ಟಿ; ಜೆಡಿಎಸ್ ಜಿಲ್ಲಾ ಘಟಕ ಮನವಿ

Published on

ಹಾವೇರಿ: ಜಿಲ್ಲೆಯ ಖಾಸಗಿ ಹಣಕಾಸು ಸಂಸ್ಥೆಗಳ ಏಜೆಂಟರು ಸಾಲಗಾರರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದು, ಇದರಿಂದ ಸಾಲಗಾರರು ಬೇಸತ್ತಿದ್ದಾರೆ. ಹಾಗಾಗಿ, ಬಲವಂತದ ಸಾಲದ ವಸೂಲಾತಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಿಂದ ಖಾಸಗಿ ಹಣಕಾಸು ಸಂಸ್ಥೆಗಳು ಲೇವಾದೇವಿ ಮಾಡುವ ನೋಂದಾಯಿತ ಖಾಸಗಿ ಹಣಕಾಸು ಸಂಸ್ಥೆಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಕೃಷಿಗಾಗಿ ಸಾಲ ಮಾಡಿಕೊಂಡ ಗ್ರಾಮೀಣ ಹಾಗೂ ಶಹರ ಪ್ರದೇಶದಲ್ಲಿ ಬಡವರಿಗೆ, ರೈತರಿಗೆ, ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದ ಆಸೆ ಆಮಿಷ ಒಡ್ಡಿ ಅವರಿಂದ ಚಾಪಾ ಕಾಗದದಲ್ಲಿ ತಮಗೆ ಅನುಕೂಲವಾಗುವಂತೆ ಷರತ್ತು ಬರೆಸಿಕೊಂಡು ಸಾಲ ನೀಡುತ್ತಿವೆ. ಸಾಲ ನೀಡಿದ ತಕ್ಷಣ ಪ್ರತಿವಾರ ಮತ್ತು ತಿಂಗಳಿಗೊಮ್ಮೆ ಸಾಲ ಪಡೆದವರ ಮನೆಗೆ ಹೋಗಿ ಅಸಲು ಮತ್ತು ಬಡ್ಡಿಯನ್ನು ತುಂಬಲು ಮುಗ್ದ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದರಿಂದ ಬೆಳೆಯಿಲ್ಲದೇ ರೈತರು ಕಂಗಾಲಾಗಿದ್ದು ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ನಾನಾ ಖಾಸಗಿ ಪೈನಾನ್ಸ್ ಕಂಪನಿಗಳು ಬಲವಂತವಾಗಿ ಖಾಸಗಿ ರಿಕವರಿ ಎಜೆಂಟರ ಮೂಲಕ ವಸೂಲಾತಿ ಮಾಡಲು ಮುಂದಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆಯ ಬಳಿಕ ಫೋನ್ ಮಾಡುವಂತಿಲ್ಲ ಎಂಬ ಆದೇಶವಿದ್ದರೂ, ಪೈನಾನ್ಸ್ ಕಂಪನಿಗಳು ಪಾಲಿಸುತ್ತಿಲ್ಲ. ಹಗಲು- ರಾತ್ರಿ ಎನ್ನದೇ ಸಾಲಗಾರರ ಮನೆಯಲ್ಲಿ 3ರಿಂದ 4 ಜನ ರಿಕವರಿ ಏಜೆಂಟರು ಸಾಲಗಾರರ ಮನೆಗೆ ಹೋಗಿ ಧಮಕಿ ಹಾಕುತ್ತಾರೆ. ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಿ ಹಲವರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಅಹಿತಕರ ಘಟನೆ ಜರುಗುವ ಮುನ್ನವೇ ಜಿಲ್ಲೆಯಲ್ಲಿರುವ ಖಾಸಗಿ ಹಣಕಾಸು ಲೇವಾದೇವಿ ಮಾಡುವ ಸಂಸ್ಥೆಗಳ ಯಾದಿಯನ್ನು ಪಡೆದುಕೊಂಡು, ಅವರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ಮತ್ತು ಗ್ರಾಹಕರ ಜತೆಗೆ ಅನುಚಿತ ವರ್ತನೆ ತೋರದಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸತೀಶ ಮಾಳದಕರ, ಅಮೀರಜಾನ್ ಬೇಪಾರಿ, ಶಿವಕುಮಾರ ತಳವಾರ, ಮಹಾಂತೇಶ ಬೇವಿನಹಿಂಡಿ, ರವಿ ಸೊಪ್ಪಿನ, ಎನ್.ಆರ್.ಪಾಟೀಲ, ವಿನಯಕುಮಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net