ಪಿಎಂಎಫ್‌ಬಿವೈ ಅನುಷ್ಠಾನಕ್ಕೆ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ; ಫಸಲ್ ಬಿಮಾ ಯೋಜನೆ ಹೆಚ್ಚಿನ ನೋಂದಣಿಗೆ ಸಂದ ಗೌರವ

18 HVR 8
Published on

ಹಾವೇರಿ: ಬೆಳೆ ಸಬ್ಸಿಡಿ ವಿಮಾ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಯನ್ನು 2023-24ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಹಾಗೂ ಪರಿಣಾಮಕಾರಿ ಆವಿಷ್ಕಾರಗಳು ಮತ್ತು ಉಪಕ್ರಮಗಳನ್ನು ಅಳವಡಿಸಿಕೊಂಡಿರುವುದನ್ನು ಗುರುತಿಸಿ ರಾಜ್ಯದ ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

ಪಿಎಂಎಫ್‌ಬಿವೈ ರೈತರನ್ನು ರಕ್ಷಿಸುವ ಗುರಿ ಹೊಂದಿರುವ ದೊಡ್ಡ ಪ್ರಮಾಣದ ಬೆಳೆ ಸಬ್ಸಿಡಿ ವಿಮಾ ಯೋಜನೆಯಾಗಿದೆ. 2016ರಲ್ಲಿ ಇದನ್ನು ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯನ್ನು ಕೃಷಿ ಸಚಿವಾಲಯದ ಅಡಿಯಲ್ಲಿ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಎಂಪನೆಲ್ಡ್ ಸಾಮಾನ್ಯ ವಿಮಾ ಕಂಪನಿಗಳೊಂದಿಗೆ ನಿರ್ವಹಿಸುತ್ತಿದೆ.

ಪ್ರಶಸ್ತಿ ಸ್ವೀಕರಿಸಿದ ಡಿಸಿ

ಕೇರಳದ ತ್ರಿವೇಂದ್ರಮ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಅವರು ಕೇಂದ್ರ ಕೃಷಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂಜೀವ ಮಾಥೂರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಕೋಟ್:

ಪಿಎಂಎಫ್‌ಬಿವೈ ರಾಷ್ಟ್ರೀಯ ಪ್ರಶಸ್ತಿ ಹಾವೇರಿ ಜಿಲ್ಲೆಗೆ ಲಭಿಸುವುದು ಸಂತಸ ತಂದಿದೆ. ಕೃಷಿ ಇಲಾಖೆ, ತೋಟಗಾರಿಕೆ, ಅಂಕಿಅಂಶಗಳು, ಕಂದಾಯ, ಆರ್‌ಡಿಪಿಆರ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ರೈತ ಸಂಘಟನೆಗಳು, ರೈತರು ಸೇರಿದಂತೆ ಹಲವರ ಸಹಕಾರದೊಂದಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದರಿಂದ ಈ ಸಾಧನೆ ಸಾಧ್ಯವಾಯಿತು.

- ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ   

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net