ಭೂಮಿ ತಾಯಿಗೆ ಚರಗ ಚೆಲ್ಲಿದ ಅನ್ನದಾತ; ಜಿಲ್ಲೆಯಲ್ಲಿ ಎಲ್ಲೆಡೆ ಶೀಗಿ ಹುಣ್ಣಿಮೆ ಸಡಗರ

6 HVR 7
Published on

ಹಾವೇರಿ: ರೈತಾಪಿ ವರ್ಗದ ಜೀವಾಳ ಭೂಮಿ ತಾಯಿ. ಭೂಮಿ ತಾಯಿ ಆರಾಧಿಸುವ ಹಬ್ಬವೇ ಸೀಗಿ ಹುಣ್ಣಿಮೆ. ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಾದ್ಯಂತ ರೈತರು ಶೀಗಿ ಹುಣ್ಣಿಮೆ ಸಂಭ್ರಮದಲ್ಲಿದ್ದು, ಭಾನುವಾರದಿಂದಲೇ ಹುಣ್ಣಿಮೆ ಆಚರಣೆ ಆರಂಭವಾಗಿದೆ. ಸೋಮವಾರ ರೈತರು ತಮ್ಮ ಹೊಲದತ್ತ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿದರು.

ಹೊಲದ ಮುಖ್ಯ ಭಾಗದಲ್ಲಿ ಐದು ಕಲ್ಲುಗಳನ್ನು ಇಟ್ಟು ಪಾಂಡವರನ್ನು ಪ್ರತಿಷ್ಠಾಪಿಸಿದ ಅನ್ನದಾತರು, ವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಗೆ ಬಗೆಯ ಹಣ್ಣು, ಕಾಯಿ, ಹೂವು ಹಾಗೂ ದೇವರಿಗಾಗಿ ಮಣ್ಣಿನ ಮಡಕೆಯಲ್ಲಿ ವಿಶೇಷವಾಗಿ ತಯಾರಿಸಿದ ಆಹಾರವನ್ನು ನೈವೇದ್ಯ ಮಾಡಿ, ಹೊಲದ ತುಂಬ ಚರಗ ಚೆಲ್ಲಿದರು. ಈ ಬಾರಿ ಉತ್ತಮ ಮಳೆಯಾಗಿ, ಉತ್ತಮವಾಗಿ ಫಸಲು ಬರಲಿ. ಕೀಟಗಳಿಂದ ರಕ್ಷಣೆ ಸಿಗಲಿ. ನಷ್ಟ ಉಂಟಾಗದಿರಲಿ ಎಂದು ಪ್ರಾರ್ಥಿಸಿದರು. ಮಂಗಳವಾರವೂ ವಿವಿಧೆಡೆ ಶೀಗಿ ಹುಣ್ಣಿಮೆ ಆಚರಣೆ ಮುಂದುವರಿಯಲಿದೆ.

ಹಾವೇರಿ ತಾಲೂಕಿನ ದಿಡಗೂರ ಗ್ರಾಮದಲ್ಲಿ ಪರಮೇಶ ಬಡಿಗೇರ ಎಂಬುವರ ಹೊಲದಲ್ಲಿ ಸೋಮವಾರ ಶೀಗಿ ಹುಣ್ಣಿಮೆ ಅಂಗವಾಗಿ ಪಾಂಡವರನ್ನು ಪ್ರತಿಷ್ಠಾಪಿಸಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಲಾಯಿತು. ನಂತರ ಕುಟುಂಬ ಸದಸ್ಯರು ಸಹಭೋಜನ ಸವಿದರು.

ಬಗೆ ಬಗೆಯ ಖಾದ್ಯ

ಜೋಳದ ಹಿಟ್ಟಿನ ಉಂಡಿಗಡುಬು, ಪುಂಡಿ ಪಲ್ಯ, ಕರ್ಚಿಕಾಯಿ, ಚವಳಿಕಾಯಿ, ಬದನೆಕಾಯಿ ಪಲ್ಯ, ಶೇಂಗಾ ಹೋಳಿಗೆ, ಎಳ್ಳು ಹೋಲಿಗೆ, ಅನ್ನ- ಸಾರು, ಖಡಕ್ ರೊಟ್ಟಿ, ಕಾಳು ಪಲ್ಯ, ಮೊಸರು ಬುತ್ತಿ, ಸೇರಿ ಹತ್ತಾರು ಬಗೆಯ ಖಾದ್ಯ ತಯಾರಿಸಿದ್ದರು. ದೇವರಿಗೆ ನೈವೇದ್ಯ ಮಾಡಿ ಚರಗ ಚೆಲ್ಲಿದರು. ನಂತರ ಕುಟುಂಬದವರು, ಸ್ನೇಹಿತರೊಂದಿಗೆ ಸೇರಿ ಸಹಭೋಜನ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net