ಸಚಿವ ಶಿವಾನಂದ ಪಾಟೀಲಗೆ ರೈತ ಮುಖಂಡರ ಮುತ್ತಿಗೆ; ಅನ್ನದಾತರ ಬಗ್ಗೆ ಹಗುರ ಮಾತಿಗೆ ಕ್ಷಮೆ ಕೇಳಲು ಪಟ್ಟು

5 HVR 2 A
Published on

ಹಾವೇರಿ: ಐದು ಲಕ್ಷ ರೂ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆ ಕುರಿತು ಕ್ಷಮೆ ಕೇಳುವಂತೆ ಆಗ್ರಹಿಸಿ ನಗರದ ಗುರುಭವನದ ಎದುರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರಿಗೆ ರೈತ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿ ಒತ್ತಾಯಿಸಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ಸಚಿವರು ಹೊರಬರುತ್ತಿದ್ದಂತೆ, ರೈತ ಮುಖಂಡರು ಮುತ್ತಿಗೆ ಹಾಕಿದರು. ನೀವು ರೈತರ ಪರವಾಗಿ ಮಾಡುತ್ತೀರಿ ಒಪ್ಪುತ್ತೇವೆ. ಆದರೆ, ಈ ರೀತಿ ಹಗುರ ಮಾತು ಬೇಡ. ಯಾರೂ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಎರಡು, ಮೂರು ಬಾರಿ ಬಿತ್ತಿದರೂ ಬೆಳೆ ಬಾರದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸರಿಯಾಗಿ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಕ್ರಿಯಿಸಿದ ಸಚಿವ ಪಾಟೀಲ, ಜಿಲ್ಲೆಯ ಹಾಗೂ ರೈತರ ಹೆಸರು ಕೆಡಬಾರದೆಂಬ ಉದ್ದೇಶದಿಂದ ಹಾಗೆ ಹೇಳಿದ್ದೇನೆ. ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಮಾಡಿಸಿದ್ದು ನಮ್ಮ ಜಿಲ್ಲೆ. ಇಡೀ ರಾಜ್ಯದಲ್ಲಿ ಕೆಲ ಮಾಧ್ಯಮದವರು ಹಾವೇರಿಯಲ್ಲೇ ರೈತ ಆತ್ಮಹತ್ಯೆ ಹೆಚ್ಚಾಗುತ್ತಿವೆ ಎಂದು ಒತ್ತಿ ಒತ್ತಿ ಬರೆಯುತ್ತಿದ್ದಾರೆ. ದಯಮಾಡಿ ಆ ರೀತಿ ಬರೆಸಬೇಡಿ, ರೈತರು ಎದೆಗುಂದುವಂತೆ ಮಾಡಬೇಡಿ. ಯಾವೊಬ್ಬ ರೈತರಿಗೂ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಭರವಸೆ ಕೊಟ್ಟರು.
ರುದ್ರಪ್ಪ ಲಮಾಣಿ ಮಾತನಾಡಿ, ದಿನದಿಂದ ದಿನಕ್ಕೆ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಸತ್ಯ ಪರಿಶೋಧನೆ ಮಾಡಲು ಸಮಿತಿ ಇದೆ. ಕೆಲವೊಂದು ಬೇರೆ ಬೇರೆ ಕಾರಣಗಳೂ ಇವೆ. ನಿಜವಾದ ರೈತರಿಗೆ ಖಂಡಿತವಾಗಿಯೂ ಪರಿಹಾರ ಕೊಡಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರೈತ ಮುಖಂಡರಾದ ಸುರೇಶ ಚಲವಾದಿ, ಹನುಮಂತಪ್ಪ ಕಬ್ಬಾರ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net