

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ಸತತವಾಗಿ 9 ದಿನಗಳಿಂದ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ ಕಷ್ಟ ಆಲಿಸಬೇಕಾದ ಜಿಲ್ಲೆಯ ಶಾಸಕರು ಮಾತ್ರ ಎಸಿ ರೂಮಲ್ಲಿದ್ದಾರೆ. ಅನ್ನದಾತರ ಸಂಕಷ್ಟ ಆಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ನಗರದ ಜಿಲ್ಲಾಡಳಿತ ಭವನದ ಎದರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ 9 ದಿನ ಕಳೆದು ಸೋಮವಾರಕ್ಕೆ 10ನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಪ್ರತಿಭಟನೆಗೆ ಬೆಂಬಲ ನೀಡಿದ ಶ್ರೀಗಳು ಮಾತನಾಡಿದರು. ಜಿಲ್ಲೆಯ ಯಾವುದೇ ಶಾಸಕರು ರೈತರ ಬೇಡಿಕೆ ಈಡೇರಿಕೆಗೆ ಕನಿಷ್ಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಶಾಸಕರು ರೈತರ ಮತಯಾಚನೆಗಷ್ಟೇ ಸೀಮಿತರಾಗಿದ್ದಾರೆ, ರೈತರ ಕಣ್ಣೊರೆಸಲು, ಅವರ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ರೈತರಿಗೆ ಡಿಸಿ ಕಚೇರಿ ಗೇಟ್ ಒಳಗೂ ಮತ್ತು ಹೊರಗೂ ಹೋರಾಟ ಮಾಡುವುದು ಗೊತ್ತು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಇದು ಶೋಭೆಯಲ್ಲ, ಮತ ಯಾಚನೆ ವೇಳೆ ಇದ್ದ ಬುದ್ಧಿ ಗೆದ್ದ ನಂತರ ಏಕಿಲ್ಲ, ಇದು ಯಾವ ನ್ಯಾಯ. ರೈತರ ಸಮಸ್ಯೆಗಳನ್ನು ಆಲಿಸಿ ಶಾಶ್ವತ ಪರಿಹಾರ ನೀಡಿ ಇಲ್ಲವೇ 50-60 ಮಠಾಧೀಶರು ಅಹೋರಾತ್ರಿ ಧರಣಿ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಮಂಡಳಿಯ ಸದಸ್ಯ ಕೆ.ಟಿ.ಗಂಗಾಧರ ಮಾತನಾಡಿ, ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ಆರಿಸುವಾಗ ಯಾವುದೇ ಆಸೆ-ಆಮಿಷಕ್ಕೆ ಬಲಿಯಾಗದೆ ಜನರ ಕಾಳಜಿ ಇರುವವರನ್ನು ಆರಿಸಬೇಕು. ಆಗ ಮಾತ್ರ ಅಧಿವೇಶನಗಳಲ್ಲಿ ಸೂಕ್ತ ನಿರ್ಣಯ ಕೈಗೊಂಡು ಜನಪರ ಕೆಲಸಗಳನ್ನು ಮಾಡಲು, ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಂದ ಜನರಿಗೆ ಮತ್ತು ರೈತರಿಗೆ ಆಪತ್ತು ಬರದಂತೆ ತಡೆಯಲು ಸಾಧ್ಯ ಎಂದರು.
ಪ್ರತಿಭಟನಾ ಸ್ಥಳಕ್ಕೆ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಮತ್ತು ಹೆಸ್ಕಾಂ ಮುಖ್ಯ ಇಂಜಿನಿಯರ್ ಭೇಟಿ ನೀಡಿ ವಿದ್ಯುತ್‌ನ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಎಚ್.ಎಚ್.ಮುಲ್ಲಾ, ದಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ಮಾಲತೇಶ ಪರಪ್ಪನವರ, ಶಿವಯೋಗಿ ಹೊಸಗೌಡ್ರ, ರುದ್ರಪ್ಪ ಹಣ್ಣಿ, ಚಂದ್ರೇಗೌಡ ಗಡಿಯಪ್ಪನವರ, ಸೋಮಣ್ಣ ಜಡೆಗೊಂಡರ, ಬಸಣ್ಣ ಕಡೂರ. ಸುರೇಶ್ ದುಳಾವಳಿ, ರಮೇಶ ಮೂಲಿಮನಿ, ಪುಟ್ಟಪ್ಪ ದೇಸಾಯಿ, ಸುರೇಶ ಮೇಡ್ಲೆರಿ, ಶ್ರೀಧರ ಮಲಗುಂದ, ಕೆ.ಟಿ.ಕಲಗೌಡ್ರ, ಶಂಕ್ರಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ಷಣ್ಮುಖ ಅಂದಲಗಿ, ಶಿವಬಸಪ್ಪ ಗೋವಿ, ಗುಡ್ಡನಗೌಡ ಪ್ಯಾಟಿಗೌಡ್ರ, ಇತರರಿದ್ದರು.