ಬರ ಪರಿಹಾರ ನೀಡದೇ ರೈತರಿಗೆ ಮೋಸ

27 HVR 4
Published on

ಹಾವೇರಿ: ಜಿಲ್ಲೆಯಲ್ಲಿ ಬರಗಾಲ ಎಂದು ಘೋಷಣೆಯಾಗಿ ಎಂಟು ತಿಂಗಳ ಗತಿಸಿದರೂ ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಹಣವನ್ನು ಮಾತ್ರ ಕೊಡುತ್ತಿದ್ದು, ಈ ಪರಿಹಾರ ಹಣವೂ ಎಲ್ಲರಿಗೂ ತಲುಪಿಸದೇ ಮೋಸ ಮಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮೂಲಕ ಡಿಸಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ರೈತರು, ಶೇ.60ರಷ್ಟು ರೈತರಿಗೆ ಈವರೆಗೆ ಪರಿಹಾರ ಜಮೆಯಾಗಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ರೈತರಿಗೆ ಹಣ ಜಮೆ ಮಾಡಲು ಮನಸು ಮಾಡುತ್ತಿಲ್ಲ. ರೈತರಿಗೆ ಏನೇನೋ ನೆಪ ಹೇಳಿ ಕಳಿಸುತ್ತಿದ್ದಾರೆ. ಎಲ್ಲವರೂ ಸರಿ ದ್ದರೂ ನಿಮ್ಮ ಅಕೌಂಟ್ ನಂಬರ್ ಸರಿ ಇಲ್ಲ, ಎಫ್‌ಐಡಿ ಸರಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಮೂಲಕ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಈ ಕೂಡಲೇ ಎಲ್ಲ ರೈತರಿಗೂ ಬರ ಪರಿಹಾರ ಜಮೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಶಂಭಣ್ಣ ಸಜ್ಜನರ, ನಿಂಗಪ್ಪ ಹೊಸೂರ, ಪರಶುರಾಮ ಹೊಸೂರ, ರಾಜು ಕೆರಿಮತ್ತಳ್ಳಿ, ಪ್ರಕಾಶ ಸಜ್ಜನ, ನೀಲಪ್ಪ ಘಂಟಿಸಿದ್ದಪ್ಪನವರ, ಇತರರಿದ್ದರು.
ತಹಸೀಲ್ದಾರ್ ಕೇಳಿ
ತಾಲೂಕಿನ ಸಂಗೂರ ಗ್ರಾಮದ ಹಲವು ರೈತರಿಗೆ ಬರ ಪರಿಹಾರ ಜಮೆಯಾಗಿಲ್ಲ. ಈ ಬಗ್ಗೆ ಗ್ರಾಪಂನ ಗ್ರಾಮ ಲೆಕ್ಕಾಧಿಕಾರಿ, ಇತರ ಸಿಬ್ಬಂದಿ ಬಳಿ ಕೇಳಿದರೆ ತಹಸೀಲ್ದಾರ್ ಬಳಿ ಹೋಗಿ ಕೇಳಿ ಎನ್ನುತ್ತಾರೆ. ತಹಸೀಲ್ದಾರ್ ಕಚೇರಿಗೆ ಹೋದರೆ ಅಲ್ಲಿಯೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ, ಜಿಲ್ಲಾಧಿಕಾರಿಯವರು ಈ ಸಮಸ್ಯೆ ಬಗೆಹರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net