

ಹಾವೇರಿ: ಮುಂಗಾರು ಮಳೆ ಕೊರತೆಯಿಂದ ಶೇ.50ಕ್ಕಿಂತ ಹೆಚ್ಚು ಬೆಳೆ ಹಾನಿಗೀಡಾದ ಮತ್ತಿತರ ಮಾನದಂಡಗಳ ಆಧಾರದ ಮೇಲೆ ರಾಜ್ಯದ 161 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ. ಇದರಲ್ಲಿ ಜಿಲ್ಲೆಯ ಹಾವೇರಿ, ಸವಣೂರ, ಹಿರೇಕೆರೂರ, ರಟ್ಟಿಹಳ್ಳಿ, ರಾಣೆಬೆನ್ನೂರ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಿದೆ. ಬ್ಯಾಡಗಿ, ಶಿಗ್ಗಾಂವಿ ಹಾಗೂ ಹಾನಗಲ್ಲ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದು ರೈತ ವಲಯದಲ್ಲಿ ಕುದಿಮೌನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಶೇ.73ರಷ್ಟು ಮುಂಗಾರು ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲಿ ಶೇ.78ರಷ್ಟು ಮಳೆ ಕೊರತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಬೆಳೆ ಹಾನಿಗೀಡಾಗಿದ್ದು, ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕೆಂದು ರೈತ ಸಂಕುಲದ ಒಕ್ಕೋರಲ ಆಗ್ರಹವಾಗಿತ್ತು. ಆದರೆ, ಸರ್ಕಾರ ಬರಪೀಡಿತ ಪಟ್ಟಿಯಲ್ಲಿ ಜಿಲ್ಲೆಯ ಐದು ತಾಲೂಕು ಮಾತ್ರ ಸೇರಿಸಿ, ಮೂರು ತಾಲೂಕುಗಳನ್ನು ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ನಮ್ಮ ತಾಲೂಕು ಯಾಕೆ ಪಟ್ಟಿಗೆ ಸೇರಲಿಲ್ಲ ಎಂಬ ಬಗ್ಗೆ ರೈತರಲ್ಲಿ ಲೆಕ್ಕಾಚಾರ ಶುರುವಾಗಿದೆ.
ಹೋರಾಟಕ್ಕೆ ಸಿದ್ಧತೆ :
ಬರಪೀಡಿತ ಜಿಲ್ಲೆ ಘೋಷಣೆ ಮಾಡುವಂತೆ ಬುಧವಾರವಷ್ಟೇ ರೈತ ಸಂಘದಿಂದ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಗುರುವಾರ ಘೋಷಣೆಯಾಗಿದ್ದರೂ ಮೂರು ತಾಲೂಕು ಕೈತಪ್ಪಿದ್ದರಿಂದ ಆಕ್ರೋಶಗೊಂಡಿರುವ ರೈತ ಸಂಘಟನೆಗಳು ಆಯಾ ತಾಲೂಕಿನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿವೆ.
ಕೋಟ್:
ರಾಜ್ಯಮಟ್ಟದ ಮಾನದಂಡಗಳ ಮೇಲೆ ಸರ್ಕಾರ ಐದು ತಾಲೂಕುಗಳನ್ನು ಆಯ್ಕೆ ಮಾಡಿದೆ. ಉಳಿದ ಮೂರು ತಾಲೂಕುಗಳಲ್ಲೂ ಶೇ,50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದು, ಇವುಗಳನ್ನೂ ಬರಪೀಡಿತವೆಂದು ಘೋಷಿಸುವಂತೆ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
ಕೋಟ್:
ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವವರೆಗೂ ಸರ್ಕಾರಿ ಕಾರ್ಯಕ್ರಮಗಳನ್ನು ತಡೆಯೊಡ್ಡುತ್ತೇವೆ. ಆಯಾ ಕ್ಷೇತ್ರಗಳ ಶಾಸಕರು ಕಾರ್ಯಕ್ರಮಕ್ಕೆ ಬಂದೆಲ್ಲೆಲ್ಲ ಬಹಿಷ್ಕಾರ ಹಾಕುತ್ತೇವೆ. ಬರಗಾಲ ಘೋಷಿಸಿಕೊಂಡೇ ತಮ್ಮ ತಾಲೂಕಿಗೆ ಶಾಸಕರು ಬರಬೇಕು.
ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಹಸಿರು ಸೇನೆ