ಸಂತ್ರಸ್ತೆ ಸ್ಪಷ್ಟನೆ ಕೊಡಬೇಕು; ರೈತ ಸಂಘದ ಹನುಮಂತಪ್ಪ ಕಬ್ಬಾರ ಆಗ್ರಹ

Kabbar
Published on

ಹಾವೇರಿ: ಸಾಮಾಜಿಕ ಹೋರಾಟಗಾರ್ತಿ, ರೈತಪರ ಹೋರಾಟಗಾರ್ತಿ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವ ಸವಣೂರಿನ ಸಂತ್ರಸ್ತೆ ರೈತಪರ ಹೋರಾಟಗಾರರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಸಚಿವ ವಿನಯ ಕುಲಕರ್ಣಿ ಅವರ ಪ್ರಕರಣದಲ್ಲಿ ಮಾಧ್ಯಮ ಹೇಳಿಕೆಯಲ್ಲಿ ನನ್ನ ಹೆಸರು ಬಳಸಿದ್ದು ಯಾಕೆ ಎಂಬ ಕುರಿತು ಸಂತ್ರಸ್ತೆ ಸ್ಪಷ್ಟಪಡಿಸಬೇಕು ಎಂದು ರೈತ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತೆ ಮಾಧ್ಯಮದ ಜತೆಗೆ ಮಾತನಾಡಿರುವ ವಿಡಿಯೋದಲ್ಲಿ ರಾಜೀ ಮಾಡುವ ಸಂದರ್ಭದಲ್ಲಿ ‘ಹನುಮಂತಣ್ಣನನ್ನು ಕರೆದುಕೊಂಡು ಬರುತ್ತೇನೆ’ ಎಂದಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ನಾನು ಸತ್ಯದ ಪರವಾಗಿ, ಅನ್ಯಾಯದ ವಿರುದ್ಧವಾಗಿ ಹೋರಾಡುತ್ತ ಬಂದಿದ್ದೇನೆ. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಅವರು ಸ್ಪಷ್ಟಪಡಿಸಬೇಕು. ಈ ಕುರಿತು ಕಾನೂನು ಹೋರಾಟ ಮಾಡುವ ಚಿಂತನೆ ನಡೆಸಿದ್ದೇನೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಭುವನೇಶ್ವರಿ ಬಡಮ್ಮನವರ ಮಾತನಾಡಿ, ಸಂತ್ರಸ್ತೆ ಹೆಣ್ಣು ಮಕ್ಕಳ ಹೆಸರು ಹಾಳು ಮಾಡುತ್ತಿದ್ದಾರೆ. ಕೇವಲ ವೈಯಕ್ತಿಕ ವಿಚಾರಕ್ಕೆ ಹೋರಾಡಿದ್ದಾರೆ. ಮನೆ, ಮಕ್ಕಳು, ಸಂಸಾರಸ್ಥೆ ಎಂದು ಹೇಳುವವ ಸಂತ್ರಸ್ತೆ ಮಧ್ಯರಾತ್ರಿ ಕರೆ ಸ್ವೀಕರಿಸಿ ಮಾತನಾಡುವುದು ಸರಿಯೋ ತಪ್ಪೋ ನೀವೇ ಹೇಳಿ. ಈಕೆಯ ರೀತಿ ಯಾರಿಗೂ ಕೆಟ್ಟ ಹೆಸರು ಬರಬಾರದು. ಮಹಿಳೆಯರಿಂದ ಮತ್ತೊಬ್ಬರಿಗೆ ಸ್ಪೂರ್ತಿ ಆಗುವಂತೆ ಕೆಲಸ ಮಾಡಬೇಕು. ಒಳ್ಳೆಯವರನ್ನೂ ಕೆಟ್ಟ ರೀತಿಯಲ್ಲಿ ನೋಡುವಂತಾಗಬಾರದು. ಇಂಥವರಿಗೆ ಯಾರೂ ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹದೇವಪ್ಪ ಮಾಳಮ್ಮನವರ, ಪುಟ್ಟಪ್ಪ ಆರ್.ಸಿ., ಮಂಜಪ್ಪ ಸಂಬೋಜಿ, ಯಲ್ಲಪ್ಪ ಚಿಕ್ಕಣ್ಣನವರ, ರಾಜಕುಮಾರ ಹರಿಜನ, ಲಲಿತಾ ಲಮಾಣಿ, ಮಂಜವ್ವ ಚೌಡಣ್ಣನವರ, ಗಂಗವ್ವ ಲಮಾಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net