ಬೆಳೆಹಾನಿ ಪರಿಹಾರ ಕೊಡಿ ಇಲ್ಲ ವಿಷ ಕೊಡಿ !; ಮುಂಗಾರು ಮಳೆಗೆ 23 ಸಾವಿರ ಹೆಕ್ಟೆರ್ ಬೆಳೆ ನೀರುಪಾಲು; ಸರ್ಕಾರದ ವಿರುದ್ಧ ರೈತರ ಆಕ್ರೋಶ

3 HVR 2 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ 

ಮುಂಗಾರು ಪೂರ್ವ ಮಳೆಯಲ್ಲಿ ಬೆಳೆ ಹಾನಿಗೆ ಒಳಗಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಅನ್ನದಾತ, ಪ್ರಸಕ್ತ ವರ್ಷದ ಮುಂಗಾರು ಮಳೆ ಕೈ ಹಿಡಿಯಬಹುದು ಎಂದು ಸಾಲ ಮಾಡಿ ಬೆಳೆದಿದ್ದ ಬೆಳೆಯೂ ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಿ ತಿಂಗಳು ಕಳೆದರೂ ಸರ್ಕಾರ ಗಮನಿಸದ ಹಿನ್ನೆಲೆಯಲ್ಲಿ ‘ಬೆಳೆಹಾನಿ ಪರಿಹಾರ ಕೊಡಿ ಇಲ್ಲವೇ ವಿಷ ಕೊಡಿ’ ಎಂದು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.27 ಹೆಕ್ಟೆರ್ ಕೃಷಿ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಶೇ.98ರಷ್ಟು ಗುರಿ ತಲುಪಲಾಗಿತ್ತು. ಆದರೆ, ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅನೇಕ ರೈತರ ಬೆಳೆಗಳು ಮೇಲೇಳದಂತಾಗಿವೆ. ಕೊಳೆ ರೋಗ, ಇತರ ರೋಗಗಳಿಂದ ಬೆಳೆ ನಷ್ಟ ಉಂಟಾಗಿವೆ. ಇದು ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯಲ್ಲಿ 22,612 ಹೆಕ್ಟೆರ್ ಕೃಷಿ ಬೆಳೆಹಾನಿಗೀಡಾಗಿದೆ. 395.82 ಹೆಕ್ಟೆರ್ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. 43 ಸಾವಿರ ಅರ್ಜಿ : ಬೆಳೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲೆಯ 43 ಸಾವಿರ ರೈತರು ಒಂದು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಬ್ಯಾಡಗಿ ತಾಲೂಕಿನಲ್ಲಿ 12 ಸಾವಿರ, ಹಿರೇಕೆರೂರ 10,500, ರಟ್ಟಿಹಳ್ಳಿ 10 ಸಾವಿರ, ಹಾನಗಲ್ಲ 7,500, ಹಾವೇರಿ ತಾಲೂಕಿನಲ್ಲಿ 3 ಸಾವಿರ ರೈತರಿಂದ ಅರ್ಜಿ ಸಲ್ಲಿಕೆಯಾಗಿವೆ. ಬಾಕ್ಸ್ ಆಮೆಗತಿಯಲ್ಲಿ ಜಂಟಿ ಸಮೀಕ್ಷೆ ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 92 ಸಾವಿರ ಹೆಕ್ಟೆರ್ ಬೆಳೆಹಾನಿ ಪ್ರದೇಶದ ಜಂಟಿ ಸಮೀಕ್ಷೆ ಮಾಡಿ ಕರಡು ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಹಾವೇರಿಯಲ್ಲಿ ಮಾತ್ರ ಜಂಟಿ ಸಮೀಕ್ಷೆ ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲಾಧಿಕಾರಿಯವರು ವಿಶೇಷ ಮುತುವರ್ಜಿ ವಹಿಸಿ, ಸಮೀಕ್ಷೆ ವೇಗ ಹೆಚ್ಚಿಸಿ, ಶೀಘ್ರದಲ್ಲೇ ಕರಡು ಪಟ್ಟಿ ಪ್ರಕಟಿಸಬೇಕು. ಪರಿಹಾರ ಬಿಡುಗಡೆ ಮಾಡಬೇಕೆಂಬುದು ರೈತರ ಆಗ್ರಹವಾಗಿದೆ. ಬಾಕ್ಸ್ ರೋಟಾವೇಟರ್ ಹಚ್ಚಿ ಬೆಳೆ ನಾಶ ಹಾವೇರಿ: ಇಲ್ಲಿನ ಹೊರವಲಯ ಜಿಎಚ್ ಕಾಲೇಜ್ ಹಿಂಭಾಗ ರಾಷ್ಟ್ರೀಯ ಹೆದ್ದಾರಿ ಬಳಿ ನಿರಂತರ ಜಿಟಿಜಿಟಿ ಮಳೆಗೆ ನೂರಾರು ಎಕರೆ ಮೆಕ್ಕೆಜೋಳ, ಹತ್ತಿ, ಹೆಸರು, ಮೆಣಸಿನಕಾಯಿ ಸೇರಿ ಇತರ ಬೆಳೆಗಳು ಹಾಳಾಗಿವೆ. ಆಲದಕಟ್ಟಿ ರೈತ ಶಿವಯೋಗಿ ವಾರ್ತಿ ಎಂಬುವರ ಹೊಲದಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಗಿಡಗಳು ಕೊಳೆತು ಹೋದ ಕಾರಣ ಬುಧವಾರ ರೋಟಾವೇಟರ್ ಹಚ್ಚಿ 5 ಎಕರೆ ಹತ್ತಿ, 5 ಎಕರೆ ಮೆಕ್ಕೆಜೋಳ, 8 ಎಕರೆ ಹೆಸರು, ಮೆಣಸಿನಕಾಯಿ, ಇತರೆ ಬೆಳೆ ನಾಶಪಡಿಸಿದರು. ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿದ್ದೆವು. ಮಳೆ ಹೆಚ್ಚಾದ ಕಾರಣ ಗಿಡಗಳು ಕೊಳೆತುಹೋಗಿವೆ. ಹಾಗಾಗಿ, ನಾಶಪಡಿಸಿದ್ದೇವೆ.

ಕೋಟ್:

ಒಂದು ಎಕರೆ ಬೆಳೆಗೆ ಕನಿಷ್ಠ 15ರಿಂದ 20 ಸಾವಿರ ರೂ. ಖರ್ಚು ಮಾಡಲಾಗಿತ್ತು. ಬೆಳೆಹಾನಿ ಅರ್ಜಿ ಸಲ್ಲಿಸಿ ತಿಂಗಳಾದರೂ ಪರಿಹಾರ ಬಂದಿಲ್ಲ. ಹೊಲ ಹೊಡೆದು ಬೇರೆ ಬಿತ್ತನೆ ಮಾಡಲು ರೈತರ ಬಳಿ ಹಣ ಇಲ್ಲದಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದರೆ ರೈತರ ನೆರವಿಗೆ ಧಾವಿಸಬೇಕು.

- ಶಿವಯೋಗಿ ವಾರ್ತಿ, ಆಲದಕಟ್ಟಿ ರೈತ

ಕೋಟ್:  

ಜಿಲ್ಲೆಯಲ್ಲಿ ಈಗಾಗಲೇ ಬೆಳೆಹಾನಿ ಜಂಟಿ ಸಮೀಕ್ಷೆ ಆರಂಭವಾಗಿದ್ದು, ಒಂದು ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಬಳಿಕ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಅನ್ವಯ ರೈತರಿಗೆ ಪರಿಹಾರ ಬಿಡುಗಡೆ ಮಾಡಲಾಗುವುದು.

- ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

ಕೃಷಿ ಬೆಳೆಹಾನಿ ಅಂಕಿ- ಅಂಶ

ತಾಲೂಕು      ಎಷ್ಟು ಹೆಕ್ಟೆರ್ ?

ಬ್ಯಾಡಗಿ           6,357

ಹಾನಗಲ್ಲ         5,980

ಹಿರೇಕೆರೂರ     5,180

ಹಾವೇರಿ           320

ರಟ್ಟಿಹಳ್ಳಿ          4,230

ಸವಣೂರ        76

ಶಿಗ್ಗಾಂವಿ         469

-----------------------------

ಒಟ್ಟು            22,612

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net