ಹಳಕಟ್ಟಿಯವರ ಸಾಹಿತ್ಯ ಕೊಡುಗೆ ಸ್ಮರಣೀಯ; ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ

2 HVR 6
Published on

ಹಾವೇರಿ: ಡಾ.ಫ.ಗು.ಹಳಕಟ್ಟಿಯವರದು ವೈವಿಧ್ಯಮಯ ವ್ಯಕ್ತಿತ್ವ. ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯವೆಂಬ ರತ್ನವನ್ನು ಶೋಧಿಸಿ, ಅನ್ವೇಷಿಸಿ, ಸಂಗ್ರಹಿಸಿ, ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ-ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ರಚಿಸಿದ ವಚನಗಳನ್ನು ಸಂಗ್ರಹಿಸಿ ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಅವುಗಳನ್ನು ಹೊಸಗನ್ನಡಕ್ಕೆ ಪರಿವರ್ತಿಸಿ ಪ್ರಚಾರಪಡಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಅವರನ್ನು ವಚನ ಪಿತಾಮಹ ಎನ್ನುತ್ತಾರೆ. ವಚನಗಳು ಅಂತರಂಗದ ಕನ್ನಡಿಯಂತೆ ಹಳಕಟ್ಟಿ ಅವರ ಬದುಕು ಮತ್ತು ಸಾಧನೆಗಳನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಆರಾಧಿಸಿದಂತೆ. ನಮ್ಮ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಶ್ರಮ, ಸಂಸ್ಕೃತಿ, ಕಾಯಕ ನಿಷ್ಠೆ, ತ್ಯಾಗ ಮನೋಭಾವ, ಸರಳ ಬದುಕು ಇಂದಿನ ಜನಾಂಗಕ್ಕೆ ಪ್ರೇರಣೆಯಾಗಿವೆ ಎಂದು ಬಣ್ಣಿಸಿದರು.
ರಾಣೆಬೆನ್ನೂರ ಆರ್.ಟಿ.ಇ.ಎಸ್ ಕಾಲೇಜು ಉಪನ್ಯಾಸಕ ಶ್ರೀನಿವಾಸ ನಲವಾಗಲ ಅವರು ಡಾ.ಫ.ಗು.ಹಳಕಟ್ಟಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಬಸವ ಬಳಗದ ಅಧ್ಯಕ್ಷ ಚನ್ನಬಸವ ರೊಡ್ಡನವರ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಮಂಜುನಾಥ ವಡ್ಡರ, ಎಂ.ಎಸ್.ಕೋರಿಶೆಟ್ಟರರ, ಇತರರು ಉಪಸ್ಥಿತರಿದ್ದರು. ಬೇಬಿ ಲಮಾಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net