ಕಾಂಗ್ರೆಸ್ ತತ್ವ, ಸಿದ್ದಾಂತ ಮೆಚ್ಚಿ ಪಕ್ಷ ಸೇರಿದ್ದೇನೆ; ಮಾಜಿ ಶಾಸಕ ನೆಹರು ಓಲೇಕಾರ ಹೇಳಿಕೆ

2 HVR 6
Published on

ಹಾವೇರಿ: ನಾನು ಯಾವುದೇ ಷರತ್ತು ಇಲ್ಲದೇ ಪಕ್ಷದ ತತ್ವ, ಸಿದ್ಧಾಂತಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಏನೂ ಅನುಕೂಲ ಆಗಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇವೆ. ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವುದನ್ನು ಬಿಟ್ಟು ದೇವರು, ಧರ್ಮ, ಮಂದಿರದ ಕುರಿತು ಬಿಜೆಪಿಯವರು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿ ಶ್ರೀಮಂತರನ್ನು ಓಲೈಸುವ ಕೆಲಸ ಮಾಡುತ್ತೆ. ಬಹಳ ಜನ ಕಾಂಗ್ರೆಸ್ ಸೇರ್ಪಡೆ ಆಗುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ. ಬೇರೆಯವರು ಸಿಎಂ ಆಗಿದ್ದಾಗ ಅವರ ಸ್ವಂತ ಜಿಲ್ಲೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ, ಹಾವೇರಿಯಲ್ಲಿ ಒಳ್ಳೆಯ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪರಶುರಾಮ ಅಗಡಿ, ಶಿವರಾಜ ಮತ್ತಿಹಳ್ಳಿ, ಅಶೋಕ ಮರೆಮ್ಮನವರ, ಇತರರಿದ್ದರು.
ಬಿಎಸ್‌ವೈ, ಬೊಮ್ಮಾಯಿ ಸಂಪರ್ಕಿಸಿಲ್ಲ
ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿದಾಗಲೂ ಬಿಜೆಪಿಯಲ್ಲೇ ಇರಿ ಎಂದು ಒಂದು ಮಾತನ್ನೂ ಹೇಳಲಿಲ್ಲ. ಬಸವರಾಜ ಬೊಮ್ಮಾಯಿ ಅವರೂ ಸಹ ಸಂಪರ್ಕಿಸಲಿಲ್ಲ. ಫೋನ್ ಮಾಡಿ ಮಾತನಾಡಲಿಲ್ಲ. ಉದಾಸೀನತೆ ತೋರುವ ಪಕ್ಷದಲ್ಲಿ ಇದ್ದರೆ ಉಪಯೋಗ ಇಲ್ಲ ಎಂದು ಭಾವಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ನಮ್ಮ ಶಕ್ತಿ ಪ್ರದರ್ಶಿಸುತ್ತೇನೆ ಎಂದು ಓಲೇಕಾರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net