ಗೆಲ್ಲುವ ಅಭ್ಯರ್ಥಿಗೆ ಶಿಗ್ಗಾಂವಿ ಟಿಕೆಟ್ ಕೊಡಿ; ಕಾಂಗ್ರೆಸ್ ಹೈಕಮಾಂಡ್‌ಗೆ ಮಾಜಿ ಸಚಿವ ಆರ್.ಶಂಕರ ಮನವಿ

R Shankar
Published on

ಹಾವೇರಿ: ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಆಕಾಂಕ್ಷಿಗಳಿದ್ದಾರೆ. ಆದರೆ, ಈ ಬಾರಿ ಗೆಲ್ಲುವ ಅಭ್ಯರ್ಥಿಗೇ ಟಿಕೆಟ್ ಕೊಡಬೇಕು ಎಂದು ಮಾಜಿ ಸಚಿವ ಆರ್.ಶಂಕರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ನಾನೂ ಸ್ಪರ್ಧಿಸಲು ಬಯಸಿದ್ದೇನೆ. ಈ ಕುರಿತು ಪಕ್ಷ ಸಮೀಕ್ಷೆ ನಡೆಸಲಿ. ಉತ್ತಮವಾದ ಮತ್ತು ಗೆಲ್ಲುವವರಿಗೇ ಟಿಕೆಟ್ ಕೊಡಲಿ. ಪಕ್ಷ ಯಾರಿಗೇ ಟಿಕೆಟ್ ಕೊಡಲಿ ಅದನ್ನು ಸ್ವಾಗತಿಸುವೆ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ ಎಂದರು.
ನಾನು ಪಕ್ಷೇತರನಾಗಿ ಸ್ಪರ್ಧಿಸಿ ರಾಣೆಬೆನ್ನೂರ ಶಾಸಕನಾಗಿದ್ದೆ. ಬಿಜೆಪಿಯವರು ಕಾಡಿಬೇಡಿ ಸಚಿವನನ್ನಾಗಿ ಮಾಡುವುದಾಗಿ ನಂಬಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದರು. ನಡುನೀರಲ್ಲಿ ಕೈಬಿಟ್ಟರು. ಆಗ ಪಕ್ಷೇತರನಾಗಿದ್ದೆ. ಹಾಗಾಗಿ, ಬಿಜೆಪಿಗೆ ಬೆಂಬಲಿಸಿದ್ದೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಪಕ್ಷದ ವರಿಷ್ಠರಲ್ಲಿ ಮನವಿ ಸಲ್ಲಿಸಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟದ್ದು.
ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಸೀರ್‌ಖಾನ್ ಪಠಾಣ ಹಾನಗಲ್ಲನವರು, ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯವರು. ನಾನು ರಾಣೆಬೆನ್ನೂರಿನ ನಿವಾಸಿ. ಶಿಗ್ಗಾಂವಿಗೆ ಹತ್ತಿರದಲ್ಲಿದ್ದೇನೆ. ಪಕ್ಷೇತರನಾಗಿ ರಾಣೆಬೆನ್ನೂರಲ್ಲಿ ಗೆದ್ದಿರುವ ನನಗೆ ಈಗ ಕಾಂಗ್ರೆಸ್ ಪಕ್ಷದ ಬಲ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು ಅಡಿವೆಪ್ಪನವರ, ಶರತ ಎಸ್.ಎನ್., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net