ವಿಶ್ವವಿದ್ಯಾಲಯ ಮುಚ್ಚಿ, ಬಾರ್ ತೆರೆಯಲು ಹೊರಟ ಸರ್ಕಾರ; ಮಾಜಿ ಸಚಿವ ಬಿ.ಸಿ ಪಾಟೀಲ ವಾಗ್ದಾಳಿ

DIP00061
Published on

ಹಾವೇರಿ: ರಾಜ್ಯ ಸರ್ಕಾರ ನೂತನ 9 ವಿಶ್ವವಿದ್ಯಾಲಯಗಳನ್ನು ಮುಚ್ಚಿ, ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯಲು ಹೊರಟಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1.16 ಸಾವಿರ ಕೋಟಿ ರೂ. ಸಾಲ ಮಾಡಿ ಆರ್ಥಿಕವಾಗಿ ದಿವಾಳಿ ಮಾಡಿರುವ ದಿವಾಳಿ ಸರ್ಕಾರ ಇದು. ಒಂದೇ ಸಮುದಾಯಕ್ಕೆ ಹೆಚ್ಚು ಅನುದಾನ ಕೊಟ್ಟು, ರೈತರಿಗೆ, ದಲಿತರಿಗೆ ಅನ್ಯಾಯ ಮಾಡಿದೆ. ಅಹಿಂದ ಅಹಿಂದ ಎನ್ನುವ ಸಿಎಂ ದಲಿತರನ್ನು ಕಡೆಗಣಿಸಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.

ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚಬಾರದು. ರೈತರಿಗೆ, ದಲಿತರಿಗೆ ಆದಂಥ ಅನ್ಯಾಯ ಸರಿಪಡಿಸಬೇಕು ಎಂದರು. ಚಿನ್ನದ ಅಕ್ರಮ ಸಾಗಣೆಗೆ ಯತ್ನಿಸಿದ ಆರೋಪಿ ರನ್ಯಾರಾವ್ ರಕ್ಷಣೆಗೆ ಯಾರು ಮುಂದಾಗಿದ್ದಾರೆ ಎಂಬುದನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಅವರಿಗೆ ಈ ಹಿಂದೆ ಭೂಮಿ ಕೊಟ್ಟಿದ್ದು ಯಾರು ಎಂದು ತನಿಖೆ ಆಗಬೇಕು ಎಂದರು.

ಗ್ಯಾಂಗ್‌ರೇಪ್ ನಾಚಿಕೆಗೇಡಿನ ಕೃತ್ಯ :

ಕೊಪ್ಪಳದಲ್ಲಿ ವಿದೇಶಿ ಪ್ರವಾಸಿಗರ ಮೇಲಿನ ಗ್ಯಾಂಗ್ ರೇಪ್ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಿ. ಸರ್ಕಾರ ತಲೆತಗ್ಗಿಸುವ, ನಾಚಿಕೆಗೇಡಿನ ಕೃತ್ಯ ಇದು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಒಬ್ಬ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಕೆಟ್ಟ ಅಭಿಪ್ರಾಯ ಮೂಡಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಹೊಡೆತ ಬೀಳುತ್ತದೆ ಎಂದರು.

ವಿಶ್ವವಿದ್ಯಾಲಯ ಮುಚ್ಚಿ, ಬಾರ್ ತೆರೆಯಲು ಹೊರಟ ಸರ್ಕಾರ; ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ.ಸಿ ಪಾಟೀಲ ವಾಗ್ದಾಳಿ

ಬಿಜೆಪಿ ಆಂತರಿಕ ಸಮಸ್ಯೆಗೆ ಶೀಘ್ರ ತೆರೆ

ಯಡಿಯೂರಪ್ಪ ಕುಟುಂಬ ಬ್ಲಾೃಕ್‌ಮೇಲ್ ಮಾಡುತ್ತಿದೆ ಎಂದು ಬಿ.ಪಿ ಹರೀಶ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲರು, ಯಾರದ್ದೋ ಪ್ರಚೋದನೆಯಿಂದ ಯಡಿಯೂರಪ್ಪನವರು ಹಾಗೂ ವಿಜಯೇಂದ್ರ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ವಿಜಯೇಂದ್ರ ಅವರನ್ನು ಯಡಿಯೂರಪ್ಪ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ. ರಾಷ್ಟ್ರೀಯ ನಾಯಕರು ಮಾಡಿದ್ದಾರೆ. ನೆಲೆ ಇಲ್ಲದ ದಕ್ಷಿಣ ಭಾರತದಲ್ಲಿ ನೆಲೆ ಕೊಟ್ಟವರು ಯಡಿಯೂರಪ್ಪನವರು. ಅವರ ಚುನಾವಣಾ ಪ್ರಚಾರದಲ್ಲಿ ಗೆದ್ದು ಬಂದು ಈಗ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಬಿಜೆಪಿಯ ಆಂತರಿಕ ಸಮಸ್ಯೆಗಳಿಗೆ ಸದ್ಯದಲ್ಲೇ ತೆರೆ ಬೀಳಲಿದೆ. ದಾವಣಗೆರೆ ಸಮಾವೇಶ ಆಗುತ್ತದೆ. ಅದಕ್ಕಾಗಿ ಚಿಂತನೆ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net