

ಹಾವೇರಿ: ನಾವು ಜಾತಿ ಗಣತಿ ವಿರೋಧಿಗಳಲ್ಲ. ಸಾಮಾಜಿಕ ಶೈಕ್ಷಣಿಕ ವರದಿ ಎನ್ನುತ್ತೀರಿ. ಕೊಟ್ಟಂತ ವರದಿಯಲ್ಲಿ ಎಲ್ಲಿಯಾದರೂ ಇಂತಹ ಸಮಾಜ ಹಿಂದುಳಿದಿದೆ ಎಂದು ಹೇಳಿಲ್ಲ. ಹಾಗಾಗಿ, ಈ ಜಾತಿಗಣತಿ ಅವೈಜ್ಞಾನಿಕವಾಗಿದೆ. ನೈಜವಾದ ಗಣತಿ ಮಾಡಿ ಎಂಬುದು ನಮ್ಮ ಆಗ್ರಹ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಎಷ್ಟಿದೆ, ಜನ ಎಷ್ಟಿದ್ದಾರೆ ಎಂದು ಹೇಳಿದರೆ ಸಾಮಾಜಿಕ, ಶೈಕ್ಷಣಿಕ ನ್ಯಾಯ ಹೇಗೆ ಸಿಗುತ್ತದೆ. ಕಾಂಗ್ರೆಸ್‌ನವರು ಉಳಿದವರನ್ನು ಮೂರ್ಖರು ಎಂದು ತಿಳಿದಿದ್ದಾರಾ ? ಕಾಂಗ್ರೆಸ್‌ನವರು 136 ಸೀಟು ಗೆದ್ದ ಮೇಲೆ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎನ್ನುವಂತಾಗಿದೆ. ಅವರು ಹೇಳಿದ್ದೇ ವೇದ ವಾಕ್ಯ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರ ಚರ್ಮ ದಪ್ಪ ಆಗಿದೆ. ಯಾರು ಎಷ್ಟೇ ಬೈದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾವ ಜಾತಿಯವರು ಎಷ್ಟಿದ್ದಾರೆ ಎಂಬ ನಿಜವಾದ ಗಣತಿ ಆಗಲಿ. ರಾಜ್ಯದಲ್ಲಿ ಕೇವಲ 65 ಲಕ್ಷ ಲಿಂಗಾಯತ ಇರಲು ಸಾಧ್ಯನಾ ? ಹಿಂದೆ 2ಎ ಬರುತ್ತದೆ ಎಂದು ಕೆಲವರು ಬೇರೆ ಬೇರೆ ಬರೆಸಿದ್ದಾರೆ. ಹಿಂದು ಗಾಣಿಗರು, ಹಿಂದು ಕುಂಬಾರರು ಎಂದು ಬರೆಸಿದ್ದಾರೆ. ಸಾದು ವೀರಶೈವರಲ್ಲಿ ಹಿಂದು ಸಾದು ಎಂದು ಬರೆಸಿದ್ದಾರೆ. ಹಾಗಾಗಿ, ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ರಾಜ್ಯದಲ್ಲಿ 67 ಸಾವಿರ ಸಾದು ಲಿಂಗಾಯತರು ಎನ್ನುತ್ತಾರೆ. ನಮ್ಮ ಹಿರೇಕೆರೂರ ತಾಲೂಕಿನಲ್ಲಿ 50 ಸಾವಿರ ಜನ ಸಾದು ಲಿಂಗಾಯತರಿದ್ದಾರೆ ಎಂದು ಆರೋಪಿಸಿದರು.
ಕುರ್ಚಿ ಅಲ್ಲಾಡುವಾಗ ಜಾತಿಗಣತಿ ಜಪ ಮಾಡುತ್ತಿದ್ದಾರೆ. ಒಂದೇ ಜಾತಿಯವರು ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟಿಲ್ಲ. ಎಲ್ಲ ಜಾತಿಯವರು ಮತ ಕೊಟ್ಟಿದ್ದಾರೆ. ಎಲ್ಲರನ್ನೂ ಸಮವಾಗಿ ನೋಡಬೇಕು. ಸಾಮಾನ್ಯ ಜನರಿಗೆ ನ್ಯಾಯ ಕೊಡಬೇಕು ಎಂದರು.