

ಹಾವೇರಿ: ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿದ ಪರಿಣಾಮ ಶೇ.80ರಷ್ಟು ಬೆಳೆಹಾನಿ ಉಂಟಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಮದ್ಯಂತರ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಕೃಷಿ ಸಚಿವ, ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ಆಗ್ರಹಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ರೈತ ವಿರೋಧಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಛೀಮಾರಿ ಹಾಕಿದರು.
ಜಿಲ್ಲೆಯ ಹಾನಗಲ್ಲ, ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರ ಹಾಗೂ ಹಾವೇರಿ ತಾಲೂಕಿನಲ್ಲಿ ಅತಿ ಹೆಚ್ಚು ಬೆಳೆಹಾನಿ ಸಂಭವಿಸಿದೆ. ರೈತರು ಸಲ್ಲಿಸಿರುವ ಅರ್ಜಿಗಳ ಆಧಾರದಲ್ಲಿ 23 ಸಾವಿರ ಹೆಕ್ಟೇರ್ ಬೆಳೆಹಾನಿ ಆಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ನಿಖರವಾಗಿ ಸಮೀಕ್ಷೆ ನಡೆಸಿದರೆ ಶೇ.80ರಷ್ಟು ಬೆಳೆಹಾನಿ ಆಗಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯಿಂದಾಗಿ 500 ಕೋಟಿ ರೂ.ನಷ್ಟು ಬೆಳೆಹಾನಿ ಆಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಸುಮಾರು 5,000 ಕೋಟಿಗಿಂತಲೂ ಹೆಚ್ಚು ಬೆಳೆಹಾನಿಯಾಗಿದೆ. ಎಲ್ಲ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ 2022ರ ಮುಂಗಾರಿನಲ್ಲಿ ರಾಜ್ಯದ 11.54 ಲಕ್ಷ ರೈತರಿಗೆ 1,187 ಕೋಟಿ ರೂ. ಹಾಗೂ ಹಾವೇರಿ ಜಿಲ್ಲೆಯ 1.30 ಲಕ್ಷ ರೈತರಿಗೆ 446.15 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2023ರ ಮುಂಗಾರಿನಲ್ಲಿ ರಾಜ್ಯದ 17.02 ಲಕ್ಷ ರೈತರಿಗೆ 1,862.3 ಕೋಟಿ ರೂ ಹಾಗೂ ಹಾವೇರಿ ಜಿಲ್ಲೆಯ 3.14 ಲಕ್ಷ ರೈತರಿಗೆ 186.90 ಕೋಟಿ ರೂ. ಪರಿಹಾರ ನೀಡಲಾಗಿತ್ತು ಎಂದರು.
ಮೇ ತಿಂಗಳಿನಿಂದಲೇ ರಾಜ್ಯದಲ್ಲಿ ಮಳೆ ಶುರುವಾಗಿದ್ದು, ಕೆಲದಿನಗಳಿಂದ ಬಿಡುವು ನೀಡಿದೆ. ಬೆಳೆಗಳು ಹಾನಿಯಾದರೂ ರಾಜ್ಯ ಸರ್ಕಾರ ಸಮರ್ಪಕವಾಗಿ ಸಮೀಕ್ಷೆ ಮಾಡುತ್ತಿಲ್ಲ. ಅಧಿಕಾರಿಗಳೂ ನಿರ್ಲಕ್ಷೃ ವಹಿಸುತ್ತಿದ್ದಾರೆ. ಸರ್ಕಾರದ ನಡೆಯಿಂದ ರೈತರು ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಶೋಭಾ ನಿಸ್ಸೀಮಗೌಡರ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶ್ವರಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ, ಇತರರಿದ್ದರು.