ರಾಜ್ಯ ಸರ್ಕಾರವೂ 3,454 ಕೋಟಿ ಪರಿಹಾರ ಕೊಡಲಿ; ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ; ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ

Basavaraj Bommai press meet
Published on

ಹಾವೇರಿ: ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವೂ 3,454 ಕೋಟಿ ರೂ. ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬವಾಗಿದೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ಹತ್ತು ತಿಂಗಳು, ಒಂದು ವರ್ಷದ ನಂತರ ಬರ ಪರಿಹಾರ ಕೊಟ್ಟಿದ್ದಾರೆ. ಆಗ ಎಂದೂ ಪ್ರತಿಭಟನೆ ಮಾಡದ ಕಾಂಗ್ರೆಸ್‌ನವರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಯುಪಿಎ ಅವಧಿಯಲ್ಲಿ 2004-14ರ ವರೆಗೆ ಹತ್ತು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ 19,579 ಕೋಟಿ ರೂ. ಮನವಿ ಸಲ್ಲಿಸಲಾಗಿತ್ತು. ಆದರೆ, ಬಿಡುಗಡೆ ಮಾಡಿದ್ದು ಕೇವಲ 1,954 ಕೋಟಿ ರೂ. ಮಾತ್ರ. ಅಂದರೆ ಒಟ್ಟು ಬೇಡಿಕೆಯ ಶೇ.10ರಷ್ಟು ಮಾತ್ರ. ಪರಿಹಾರ ಬಂದಿತ್ತು. ಎನ್‌ಡಿಎ ಅವಧಿಯಲ್ಲಿ 2014-24ವರೆಗೆ ರಾಜ್ಯ ಸರ್ಕಾರದಿಂದ 18,747 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ 6,185 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ, ಶೇ.30ರಷ್ಟು ಪರಿಹಾರ ಬಿಡುಗಡೆ ಮಾಡಿದೆ. ಈಗ ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದರೆ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ನವರು ಇದ್ದಾರೆ ಎಂದು ಹೇಳಿದರು.
ಜನರ ಆಸ್ತಿ ಹಂಚಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ವೆ ಮಾಡುತ್ತೆವೆ ಅಂತ ಹೇಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದ ನಾಯಕರ ಬೇನಾಮಿ ಆಸ್ತಿ ಸರ್ವೆ ಆಗಬೇಕು. ಉದ್ಯಮಿಗಳಾದ ಅದಾನಿ ಅಂಬಾನಿಯನ್ನು ಕಾಂಗ್ರೆಸ್‌ನವರೇ ಬೆಳೆಸಿದ್ದಾರೆ. 1980ರ ದಶಕದಲ್ಲಿ ಯಾರು ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಅವರು ಉದಾರಿಕರಣ, ಖಾಸಗೀಕರಣ ಮಾಡಿದರು. ಅದರ ಪರಿಣಾಮ ಖಾಸಗಿಯವರು ಶ್ರೀಮಂತರಾಗಿದ್ದಾರೆ. ಮೋದಿಯವರ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕೊಟ್ಯಾಧೀಶರಾಗಿದ್ದಾರೆ. 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡಿದ್ದಾರೆ. ಶೇ.6.6ರಷ್ಟು ಆರ್ಥಿಕ ಅಭಿವೃದ್ಧಿ ಆಗಿದೆ. ಬೇರೆ ಯಾವುದೇ ದೇಶ ಇಷ್ಟು ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿದರು.
ಎನ್‌ಡಿಎ- ಯುಪಿಎ ದಾಖಲೆ ಬಿಡುಗಡೆ
ಎನ್‌ಡಿಎ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಹಾರ ಎಷ್ಟು ? ಕೇಂದ್ರ ಕೊಟ್ಟಿದ್ದೆಷ್ಟು ಎಂಬ ಅಂಕಿ ಅಂಶಗಳ ದಾಖಲೆಯನ್ನು ಬೊಮ್ಮಾಯಿ ಬಿಡುಗಡೆಗೊಳಿಸಿದರು.
2004-05ರಲ್ಲಿ ರಾಜ್ಯ ಸರ್ಕಾರ 1,147 ಕೋಟಿ ರೂ. ಕೇಳಿತ್ತು, ಆಗ ಅವರು ಕೊಟ್ಟಿದ್ದು 83 ಕೋಟಿ, 2006-07ರಲ್ಲಿ ರಾಜ್ಯ ಸರ್ಕಾರ 1,262 ಕೇಳಿತ್ತು, ಕೇಂದ್ರ ಕೊಟ್ಟಿದ್ದು 78 ಕೋಟಿ ರೂ., 2008-09ರಲ್ಲಿ ರಾಜ್ಯ ಸರ್ಕಾರ 2,043 ಕೋಟಿ ರೂ. ಕೇಳಿತ್ತು. ಕೇಂದ್ರ ಕೊಟ್ಟಿದ್ದು 83 ಕೋಟಿ ರೂ. ಮಾತ್ರ. 2011-12ರಲ್ಲಿ 6,214 ಕೋಟಿ ರೂ. ಕೇಳಿದ್ದರೆ ಸಿಕ್ಕಿದ್ದು ಮಾತ್ರ 760 ಕೋಟಿ ರೂ. 2012-13ರಲ್ಲಿ 7,642 ಕೋಟಿ ರೂ. ಪರಿಹಾರ ಕೇಳಿದರೆ ಸಿಕ್ಕಿದ್ದು 526 ಕೋಟಿ ರೂ. 2013-14ರಲ್ಲಿ 877.ಕೋಟಿ ರೂ. ಕೇಳಿದರೆ 308 ಕೋಟಿ ಮಾತ್ರ ಬಿಡುಗಡೆಯಾಗಿತ್ತು ಎಂದು ವಿವರಿಸಿದರು.
ಇನ್ನು 2014ರಿಂದ 24ರವರೆಗೆ ಎನ್‌ಡಿಎ ಅವಧಿಯಲ್ಲಿ 2014-15ರಲ್ಲಿ ರಾಜ್ಯ ಸರ್ಕಾರ 930 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 305 ಕೋಟಿ ರೂ. ಪರಿಹಾರ ನೀಡಿತ್ತು. 2015-16ರಲ್ಲಿ 5,247 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 2,263 ಕೋಟಿ ರೂ. ಬಿಡುಗಡೆ ಮಾಡಿತ್ತು. 2016-17ರಲ್ಲಿ 7,572 ಕೋಟಿ ರೂ. ಕೇಳಿದರೆ ಕೇಂದ್ರದಿಂದ 2,577 ಕೋಟಿ ರೂ. ಪರಿಹಾರ ಬಂದಿತ್ತು. 2018-19ರಲ್ಲಿ ರಾಜ್ಯ ಸರ್ಕಾರ 4,064 ಕೋಟಿ ರೂ. ಮನವಿ ಮಾಡಿತ್ತು. ಕೇಂದ್ರದಿಂದ 1,040 ಕೋಟಿ ರೂ. ಬಿಡುಗಡೆಯಾಗಿತ್ತು.

ಕಾಂಗ್ರೆಸ್‌ಗೆ ಮೋದಿ ಫೋಬಿಯಾ
ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್‌ಗೆ ಮೋದಿ ಫೋಬಿಯಾ ಶುರುವಾಗಿದೆ. ಮೋದಿಯವರನ್ನು ಟೀಕಿಸಿದಷ್ಟು ಅವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಹಾವೇರಿ ಕ್ಷೇತ್ರಕ್ಕೆ ನಡ್ಡಾ, ಷಾ
ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮಿಸಲಿದ್ದಾರೆ ಎಂದು ಮಾಜಿ ಬೊಮ್ಮಾಯಿ ಹೇಳಿದರು. ಏ.30ರಂದು ಜೆ.ಪಿ.ನಡ್ಡಾ ಆಗಮಿಸಲಿದ್ದು, ಮೊದಲು ಕಾಗಿನೆಲೆಗೆ ಬಂದು ದೇವರ ದರ್ಶನ ಪಡೆದು, ನಂತರ ಮೊಟೆಬೆನ್ನೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಮಿತ್ ಷಾ ಮೇ 1ಕ್ಕೆ ರಾಣೆಬೆನ್ನೂರಿನ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೋಟ್:
ಗ್ಯಾರಂಟಿಗೆ ಹಣ ಸುರಿದಿರುವ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಹಾಗಾಗಿ, ತನ್ನ ಖಜಾನೆಯಿಂದ ನಯಾಪೈಸೆ ಬರ ಪರಿಹಾರ ನೀಡುತ್ತಿಲ್ಲ. ಇದನ್ನು ಮರೆಮಾಚಿಕೊಳ್ಳುವ ಸಲುವಾಗಿ ಕೇಂದ್ರದ ವಿರುದ್ಧ ಪ್ರತಿಭಟನೆಯ ನಾಟಕ ಹೂಡಿದ್ದಾರೆ. ವಿಳಂಭವಾದರೂ ಸರಿ ಈಗ ಕೇಂದ್ರ ಹಣ ಬಿಡುಗಡೆ ಮಾಡಿದೆಯಲ್ಲ. ಇನ್ನಾದರೂ ತಾವು ತಮ್ಮ ಪಾಲು ಎಷ್ಟೆಂದು ಈ ಕೂಡಲೇ ಸಿಎಂ, ಡಿಸಿಎಂ ಘೋಷಿಸಬೇಕು.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net