ಕಾರ್ಮಿಕನ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಇಎಸ್‌ಐಗೆ ಆದೇಶ

Judgement
Published on

ಹಾವೇರಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕನ ಚಿಕಿತ್ಸಾ ವೆಚ್ಚ ಪಾವತಿಸಲು ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
ಬ್ಯಾಡಗಿ ತಾಲೂಕು ಮಾಸಣಗಿ ಗ್ರಾಮದ ಕುಮಾರಸ್ವಾಮಿ ಹಿರೇಮಠ ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2015, ನವೆಂಬರ್ 13ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಮಾರಸ್ವಾಮಿ ತಲೆಗೆ ಗಂಭೀರವಾದ ಗಾಯವಾಗಿತ್ತು. ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ 2108, ನವೆಂಬರ್ 2ರಂದು ಕುಮಾರಸ್ವಾಮಿ ಮೃತಪಟ್ಟಿದ್ದರು.
ಕುಮಾರಸ್ವಾಮಿ ಚಿಕಿತ್ಸೆಗಾಗಿ 4,43,962 ರೂ. ವೆಚ್ಚ ಮಾಡಲಾಗಿತ್ತು. ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐ) ನಿಗಮದ ಸದಸ್ಯನಾಗಿ ನೋಂದಣಿ ಪಡೆದುಕೊಂಡಿದ್ದ ಕಾರಣ 2016, ಆಗಸ್ಟ್ 24ರಂದು ನಿಯಮಾನುಸಾರ ಚಿಕಿತ್ಸಾ ವೆಚ್ಚ ಕೋರಿ ಕಾರ್ಮಿಕರ ರಾಜ್ಯ ವಿಮಾ ನಿಗಮದ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ವಿಮಾ ಸಂಸ್ಥೆ ಚಿಕಿತ್ಸಾ ವೆಚ್ಚ ಪಾವತಿಸಲು ನಿರಾಕರಿಸಿದ ಕಾರಣ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಕುಟುಂಬದವರು ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಚಿಕಿತ್ಸಾ ವೆಚ್ಚದ ಮೊತ್ತ 4,43,962 ರೂ. ಹಾಗೂ ಸೇವಾ ನೂನ್ಯತೆಗಾಗಿ ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸುವಂತೆ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸುವಂತೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net