

ಹಾವೇರಿ: ದೇಶದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾರಣಗಳಿಗೆ ಈವರೆಗೆ ಅಂದಾಜು 10 ಕೋಟಿ ಗಿಡ, ಮರಗಳನ್ನು ನಾಶಮಾಡಲಾಗಿದೆ. ಇದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಜತೆಗೆ ಬಿಸಿಲಾಘಾತದಿಂದ ಸಾವುಗಳು ಸಂಭವಿಸುತ್ತಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ.ಸದಾನಂದಸ್ವಾಮಿ ಆತಂಕ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾವೇರಿ ಪ್ರಾದೇಶಿಕ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಸಿಲಿನ ತಾಪಮಾಣ ಕೆಡಿಮೆ ಮಾಡಲು ನಿಮ್ಮ ಬಿಡುವಿನ ಸಮಯದಲ್ಲಿ ಮನೆಯ ಆವರಣದಲ್ಲಿ ವಿವಿಧ ಮರಗಳ ಸಸಿಗಳನ್ನು ನೆಡಬೇಕು. ನೆಟ್ಟ ಸಸಿಗಳನ್ನು ತಾಯಿಯಂತೆ ಗೌರವಿಸಿ, ಮಕ್ಕಳಂತೆ ಸಂರಕ್ಷಿಸಿ ಹಾಗೂ ಬಂಧುಗಳಂತೆ ಆಧರಿಸಬೇಕು ಎಂದು ಕಿವಿಮಾತು ಹೇಳಿದರು.
ಇಂದು ಅತೀಯಾದ ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯನ ಆರೋಗ್ಯ ಹಾಗೂ ಪರಿಸರದಲ್ಲಿ ಅನೇಕ ದುಷ್ಪರಿಣಾಮ ಉಂಟಾಗುತ್ತಿದೆ. ಬಿಸಿಯಾದ ಪದಾರ್ಥವನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿದರೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಬಿಡಬೇಕು. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ಜೀವರಾಶಿಗಳಿಗೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ. ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ರಮೇಶರಾವ ಮುತಾಲಿಕದೇಸಾಯಿ ಮಾತನಾಡಿ, ಪ್ರತಿ ತಾಲೂಕಿನಲ್ಲಿ 10 ಸಾವಿರ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿದ್ದು, ಈ ಗುರಿ ಸಾಧನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿ, ಗಿಡ-ಮರಗಳನ್ನು ಬೆಳೆಸುವುದರೊಂದಿಗೆ ಜಲಮಾಲಿನ್ಯ ಹಾಗೂ ವಾಯುಮಾಲಿನ್ಯ ತಡೆಯುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಹಾಗೂ ಹಾಗೂ ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ರಮೇಶ ಮಾತನಾಡಿದರು. ಜೋಡಿ ಬಸವೇಶ್ವರ ಕಲಾತಂಡದಿಂದ ಪರಿಸರ ಜಾಗೃತಿ ಗೀತೆ ಗಾಯನ ನಡೆಯಿತು. ನಂತರ ಕಿರುನಾಟಕ ಪ್ರದರ್ಶಿಸಲಾಯಿತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಇತರರು ಉಪಸ್ಥಿತರಿದ್ದರು. ಸವಿತಾ ಬೆಳ್ಳಿಗಟ್ಟಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.
ಗಮನ ಸೆಳೆದ ಪರಿಸರ ಜಾಥಾ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಹಾವೇರಿ ನಗರದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾಕ್ಕೆ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಶಾಲಾ ಮಕ್ಕಳು ಪರಿಸರ ರಕ್ಷಣೆ ಮೂಡಿಸುವ ಘೋಷ ವಾಕ್ಯಗಳನ್ನು ಪ್ರದರ್ಶಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಜಾಥಾ ಜರುಗಿತು.