

ಹಾವೇರಿ: ಇಲ್ಲಿನ ವಿದ್ಯಾನಗರ ಪಶ್ಚಿಮ ಭಾಗ ಬಡಾವಣೆಯಲ್ಲಿ ಮನೆಯೊಂದರ ಮುಂದೆ ಚಾರ್ಜಿಂಗ್ ಇಟ್ಟಿದ್ದ ಇಲೆಕ್ಟ್ರಿಕ್ ಸ್ಕೂಟಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಧಗ ಧಗನೆ ಹೊತ್ತಿ ಉರಿದ ಇ-ವಾಹನ ಕಂಡು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ನಿವೃತ್ತ ಶಿಕ್ಷಕ ಗಿರೀಶ ಪಾಟೀಲ ಎಂಬುವರು ಮನೆಯ ಮುಂದೆ ಸ್ಕೂಟಿ ಚಾರ್ಜಿಂಗ್‌ಗಾಗಿ ಪ್ಲಗ್ ಮಾಡಿಸಿದ್ದರು. ರಾತ್ರಿ ಚಾರ್ಜಿಂಗ್ ಹಾಕಿ ಮನೆಯೊಳಗೆ ಕುಳಿತಿದ್ದರು. ಚಾರ್ಜಿಂಗ್ ಹಾಕಿದ ಸುಮಾರು ಒಂದು ಗಂಟೆ ಬಳಿಕ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡು, ಸ್ಕೂಟಿಗೆ ವ್ಯಾಪಿಸಿದೆ. ಬೆಂಕಿ ಜೋರಾಗಿ ಹೊತ್ತಿಕೊಳ್ಳುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡ ಗಿರೀಶ ಅವರು ಮನೆಯ ಮುಖ್ಯ ಪ್ಲಗ್ ಬಂದ್ ಮಾಡಿ ಮನೆಯಿಂದ ಎಲ್ಲರನ್ನೂ ಕರೆದುಕೊಂಡು ಹೊರಗೆ ಬಂದಿದ್ದಾರೆ.
ಸ್ಥಳೀಯರು ಸ್ಕೂಟಿ ಮೇಲೆ ಬಕೆಟ್‌ನಿಂದ ನೀರು ಹಾಕಿ ಬೆಂಕಿ ನಂದಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಹರ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಸ್ಕೂಟಿ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಘಟನೆಯಿಂದ ಸ್ಥಳೀಯರು ಕೆಲಕಾಲ ಆತಂಕಕ್ಕೀಡಾಗಿದ್ದರು.
ಎರಡು ವರ್ಷದ ಹಿಂದೆ ಖರೀದಿ
ಹಾವೇರಿ ಅಶ್ವಿನಿ ನಗರದ ಡೀಲರ್ ಬಳಿ 2021ರಲ್ಲಿ ಇಲೆಕ್ಟ್ರಿಕ್ ಸ್ಕೂಟಿ ಖರೀದಿಸಿದ್ದೆ. ಸದ್ಯಕ್ಕೆ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕಂಪನಿಯವರನ್ನು ಸಂಪರ್ಕಿಸಲು ಯತ್ನಿಸಲಾಗುತ್ತಿದೆ ಎಂದು ಗಿರೀಶ ತಿಳಿಸಿದ್ದಾರೆ.